ಕಲಬುರ್ಗಿ, ಜೂ.೧೭- ನಗರದ ಜಾಫರಾಬಾದ್ ಕ್ರಾಸ್ ಹತ್ತಿರ ಇರುವ ಆರ್ ಟೇಲ್ ಜನರಲ್ ಆಂಡ್ ಮೆಟರನಿಟಿ ಹಾಸ್ಪೆಟಲ್‌ನಲ್ಲಿ ಚಿಕಿತ್ಸೆ ಪಡೆದ ಆಶ್ರಯ ಕಾಲೋನಿಯ ಶ್ರೀಮತಿ ಸುಲೋಚನಾ ಗಂಡ ಚಂದ್ರಶಾ ಸಿಂಗೆ ಅವರ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕು ಎಂದು ಭೀಮಶಕ್ತಿ ರಾಜ್ಯಾಧ್ಯಕ್ಷ ಅಂಬಾಜಿ ಪಿ. ಮೇಟಿ ಅವರು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯ ಅನುಮಾನಾಸ್ಪದ ಸಾವು ಕುರಿತು ಆಸ್ಪತ್ರೆ, ಚಿಕಿತ್ಸೆ ನೀಡಿದ ವ್ಯಕ್ತಿ ಹಾಗೂ ಅಧಿಕಾರಿಗಳ ನಿರ್ಲಕ್ಷö್ಯಕ್ಕೆ ಕಾರಣವಾಗಿದ್ದು, ಈ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದರು.

ಘಟನೆಗೂ ಮುನ್ನವೇ ಕಳೆದ ೧ರಂದು ಸಂಘಟನೆಯ ವತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಅವರಿಗೆ ಲಿಖಿತ ದೂರು ಸಲ್ಲಿಸಿ, ಸದರಿ ಆಸ್ಪತ್ರೆಯ ಕಾನೂನುಬದ್ಧತೆ, (ಟಿಎಚ್‌ಓ) ನೋಂದಣಿ, ವೈದ್ಯರ ಅರ್ಹತೆ ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳ ಕುರಿತು ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿ ತುರ್ತು ಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿತ್ತು. ಆದರೆ, ನಮ್ಮ ದೂರಿನ ಕುರಿತು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಿಲ್ಲ. ಇದರ ಮಧ್ಯೆಯೇ, ಕಳೆದ ೧೫ರಂದು ರಾತ್ರಿ ಸುಮಾರು ೮.೩೦ ಗಂಟೆಗೆ ಶ್ರೀಮತಿ ಸುಲೋಚನಾ ಅವರು ಜ್ವರ ಮತ್ತು ಚಳಿಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದ ಕೆಲವೇ ಸಮಯದಲ್ಲಿ ಮೃತಪಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ ಎಂದು ಅವರು ಹೇಳಿದರು.

ಈ ಘಟನೆ ಕೇವಲ ಒಂದು ಸಾವಿನ ಪ್ರಕರಣ ಮಾತ್ರವಲ್ಲ. ಸಾರ್ವಜನಿಕರ ಜೀವ ಮತ್ತು ಆರೋಗ್ಯದ ಸುರಕ್ಷತೆಯ ಕುರಿತು ನಾವು ಹದಿನೈದು ದಿನಗಳ ಹಿಂದೆಯೇ ವ್ಯಕ್ತಪಡಿಸಿದ್ದ ಆತಂಕಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಅಗತ್ಯವನ್ನು ಇದು ಮತ್ತೊಮ್ಮೆ ಎತ್ತಿ ತೋರಿಸಿದೆ ಎಂದು ತಿಳಿಸಿದ ಅವರು, ಪ್ರಕರಣಕ್ಕೆ ಸಂಬAಧಿಸಿದAತೆ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್ ನೀಡಿರುವ ಹೇಳಿಕೆಯ ಪ್ರಕಾರ, ರಹೀಂ ಪಟೇಲ್ ಅವರು ಬರೆದು ಕೊಟ್ಟ ಇಂಜೆಕ್ಷನ್ ನಾನು ರೋಗಿಗೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ, ಇಂಜೆಕ್ಷನ್ ನೀಡಿದ ನಂತರ ರೋಗಿಯು “ಕೈ ಜುಮ್ ಆಗುತ್ತಿದೆ, ಇಡೀ ಮೈ ತಳತಳಿಸುತ್ತಿದೆ ಎಂದು ಅಸ್ವಸ್ಥತೆ ವ್ಯಕ್ತಪಡಿಸಿದ್ದಾಗಿ ಹಾಗೂ ಬಳಿಕ ಸಂಬAಧಪಟ್ಟ ವ್ಯಕ್ತಿಯನ್ನು ಕರೆಸಲಾಗಿತ್ತು ಎಂದು ನರ್ಸ್ ಹೇಳಿದ್ದಾರೆ. ಈ ಸಂಬAಧದ ವಿಡಿಯೋ ಸಾಕ್ಷಿಯು ನಮ್ಮ ಬಳಿ ಲಭ್ಯವಿದೆ ಎಂದು ಅವರು ತಿಳಿಸಿದರು.

ಇದರಿಂದಾಗಿ, ಚಿಕಿತ್ಸೆ ನೀಡಿದವರು ಯಾರು. ಇಂಜೆಕ್ಷನ್ ಸೂಚಿಸಿದವರು ಯಾರು, ಅವರ ವೈದ್ಯಕೀಯ ಆರ್ಹತೆ ಏನು, ರೋಗಿಯ ಸ್ಥಿತಿ ಹದಗೆಟ್ಟ ನಂತರ ಯಾವ ರೀತಿಯ ಚಿಕಿತ್ಸೆ ನೀಡಲಾಯಿತು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇದಲ್ಲದೆ, ಲಭ್ಯವಿರುವ ಕೆಪಿಎಂಇ ದಾಖಲೆಗಳಲ್ಲಿ ಆಸ್ಪತ್ರೆಯ ಹೆಸರು ಆರ್. ಪಟೇಲ್ ಹಾಸ್ಪಿಟಲ್ ಎಂದು ದಾಖಲಾಗಿದ್ದು, ನೈಜವಾಗಿ ಆರ್, ಪಟೇಲ್ ಜನರಲ್ ಆಂಡ್ ಮೆಟರನಿಟಿ ಹಾಸ್ಪಿಟಲ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರಿತು ಚರ್ಚೆಗಳಾಗುತ್ತಿವೆ. ಆಸ್ಪತ್ರೆಯ ಕಾನೂನು ಬದ್ಧ ಕಾರ್ಯಾಚರಣೆ, ಅನುಮತಿಗಳು ನೈಜವಾಗಿ ಹಾಗೂ ವೈದ್ಯಕೀಯ ಸಿಬ್ಬಂದಿಯ ಅರ್ಹತೆಗಳ ಕುರಿತು ಸಮಗ್ರ ತನಿಖೆ ನಡೆಸುವುದು ಅತ್ಯಗತ್ಯ ಎಂದು ಅವರು ಹೇಳಿದರು.

ಪ್ರಕರಣದಲ್ಲಿ ಆಸ್ಪತ್ರೆಯ ಪಾತ್ರ ಮಾತ್ರವಲ್ಲದೆ, ಕಳೆದ ೧ರಂದು ಸಲ್ಲಿಸಲಾದ ದೂರಿನ ಮೇಲೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆಯ ಅಧಿಕಾರಿಗಳ ಪಾತ್ರವನ್ನೂ ತನಿಖೆಗೆ ಒಳಪಡಿಸಬೇಕು. ಒಂದು ವೇಳೆ ನಮ್ಮ ದೂರಿನ ಮೇರೆಗೆ ಸಕಾಲದಲ್ಲಿ ಪರಿಶೀಲನೆ ಮತ್ತು ಅಗತ್ಯ ಕ್ರಮ ಜರುಗಿದ್ದರೆ ಈ ದುರ್ಘಟನೆ ತಪ್ಪಿಸಬಹುದಾಗಿತ್ತೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸಿದೆ. ಸಾರ್ವಜನಿಕರ ಜೀವಕ್ಕೆ ಸಂಬAಧಿಸಿದ ಗಂಭೀರ ದೂರನ್ನು ನಿರ್ಲಕ್ಷಿಸಿರುವುದು ಕರ್ತವ್ಯಲೋಪವೇ ಎಂಬುದನ್ನು ತನಿಖೆಯಿಂದಲೇ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಕೂಡಲೇ ಮಹಿಳೆಯ ಸಾವಿನ ಕುರಿತು ಉನ್ನತ ಮಟ್ಟದ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ಕೈಗೊಳ್ಳುವಂತೆ, ಆಸ್ಪತ್ರೆಯ ಕಾನೂನು ಬದ್ಧತೆ, ಕೆಪಿಎಂಇ ಅನುಸರಣೆ ಕಾರ್ಯಾಚರಣೆಯ ಕುರಿತು ಸಮಗ್ರ ತನಿಖೆ ಮಾಡುವಂತೆ, ಚಿಕಿತ್ಸೆ ನೀಡಿದ ವೈದ್ಯರು ಮತ್ತು ಇಂಜೆಕ್ಷನ್ ಸೂಚಿಸಿದ ವ್ಯಕ್ತಿಯ ವಿದ್ಯಾರ್ಹತೆ, ಕೆಎಂಸಿ, ಎನ್‌ಎಂಸಿ ನೋಂದಣಿ ಹಾಗೂ ಕಾನೂನುಬದ್ಧ ಅಧಿಕಾರವನ್ನು ಬಹಿರಂಗಪಡಿಸುವAತೆ, ಎಡ್ಮಿಶನ್ ರಜಿಸ್ಟರ್, ಕೇಸ್ ಶೀಟ್, ಟ್ರೀಟಮೆಂಟ್ ನೋಟ್ಸ್, ಇಂಜೆಕ್ಷನ್ ದಾಖಲೆಗಳು, ರೆಫರಲ್ ರೆಕಾಡ್ಸ್ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳುವಂತೆ, ನಿಷ್ಪಕ್ಷಪಾತ ತನಿಖೆಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿಗಳನ್ನು ತಕ್ಷಣ ಅಮಾನತ್ತುಗೊಳಿಸುವಂತೆ ಅವರು ಆಗ್ರಹಿಸಿದರು.

ತನಿಖೆಯಲ್ಲಿ ಕರ್ತವ್ಯಲೋಪ ಅಥವಾ ನಿರ್ಲಕ್ಷ್ಯ ಸಾಬೀತಾದಲ್ಲಿ ಸಂಬAಧಪಟ್ಟ ಅಧಿಕಾರಿಗಳ ವಿರುದ್ಧ ಇಲಾಖಾ ಹಾಗೂ ಕಾನೂನುಬದ್ಧ ಕ್ರಮ ಜರುಗಿಸಬೇಕು. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಮಿಸಿದ ಅವರು, ಶ್ರೀಮತಿ ಸುಲೋಚನಾ ಅವರಿಗೆ ನಿಜವಾಗಿ ಚಿಕಿತ್ಸೆ ನೀಡಿದ ವೈದ್ಯರು ಯಾರು? ಐವಿ ಹೈಡ್ರಾಕಾರ್ಟ್ ಇಂಜೆಕ್ಷನ್ ಬರೆದು ಕೊಟ್ಟ ರಹೀಂ ಪಟೇಲ್ ಅವರ ವೈದ್ಯಕೀಯ ಅರ್ಹತೆ ಏನು?, ರೋಗಿಯು ಮೃತಪಟ್ಟ ನಂತರ ಜಯದೇವ ಆಸ್ಪತ್ರೆಗೆ ಚೀಟಿ ಬರೆದು ಕೊಟ್ಟು ಕಳುಹಿಸಿ, ಈ ಕಡೆಯಿಂದ ಆಸ್ಪತ್ರೆಯ ವೈದ್ಯರು ಸೇರಿದಂತೆ ಎಲ್ಲ ಸಿಬ್ಬಂದಿಗಳು ಆಸ್ಪತ್ರೆ ಬಿಟ್ಟು ಪರಾರಿಯಾಗಿದ್ದು ಯಾಕೆ?, ಕಳೆದ ೧ರಂದು ಸಲ್ಲಿಸಿದ್ದ ದೂರಿನ ಮೇಲೆ ಸಂಬAಧಪಟ್ಟ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳಲಿಲ್ಲ? ಎಂಬ ಪ್ರಶ್ನೆಯನ್ನು ಜಿಲ್ಲಾಡಳಿತಕ್ಕೆ ಕೇಳಿರುವ ಅವರು, ಕೂಡಲೇ ಉತ್ತರ ಒದಗಿಸಬೇಕು ಎಂದು ಒತ್ತಾಯಿಸಿದರು.

ಕುಟುಂಬಕ್ಕೆ ನ್ಯಾಯ ದೊರಕುವವರೆಗೆ ಹಾಗೂ ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರುವವರೆಗೆ ಸಂಘಟನೆಯು ಹೋರಾಟ ಮುಂದುವರೆಸಲಿದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಎಂ. ಮುಡ್ಡಿ ಅವರು ಉಪಸ್ಥಿತರಿದ್ದರು.

Share This Article
Leave a Comment