ಕಲಬುರಗಿ,ಮೇ.18-ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಪ್ರಾಣಿ, ಪಕ್ಷಿ, ಸಸ್ಯ, ಕೀಟ ಪ್ರಬೇಧಗಳ ಸಂರಕ್ಷಣೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕಲಬುರಗಿ ಅತ್ಯಾಕರ್ಷಕ ಮೃಗಾಲಯವು ವನ್ಯಜೀವಿಗಳ ಮೇಲಿನ ಕಾಳಜಿ ಹೆಚ್ಚಿಸುವುದರ ಜೊತೆಗೆ ಪ್ರದೇಶದ ಪರಿಸರ ಪ್ರೇಮಿ, ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹಾಗೂ ಪ್ರವಾಸಿ ತಾಣವಾಗಿ ಇದು ರೂಪಗೊಳ್ಳಲಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಜಿಲ್ಲಾಡಳಿತ, ಅರಣ್ಯ ಇಲಾಖೆ, ಕೆ.ಕೆ.ಆರ್.ಡಿ.ಬಿ. ಮಂಡಳಿ ಹಾಗೂ ಮೂರ್ತಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಸೋಮವಾರ ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದಲ್ಲಿ ಸುಮಾರು 43 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಕಲಬುರಗಿ ಮೃಗಾಲಯವನ್ನು
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಮ್ಮ ಸರ್ಕಾರ ಬಂದ ಮೇಲೆ ನೆನೆಗುದ್ದಿಗೆ ಬಿದಿದ್ದ ಈ ಕಾರ್ಯಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಆಸಕ್ತಿ ವಹಿಸಿ ಚುರುಕುಗೊಳಿಸಿದ ಪರಿಣಾಮ ಇಂದಿಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹಂಪಿ ಹೊರತುಪಡಿಸಿದರೆ ಎರಡನೇ ಮೃಗಾಲಯ ಪ್ರದೇಶಕ್ಕೆ ಲೋಕಾರ್ಪಣೆ ಮಾಡಲಾಗಿದದ್ದು, ಎಲ್ಲಾ ವಯೋಮಾನದವರಿಗೆ ಜನಾಕರ್ಣನೆಯಾಗಲಿದೆ ಎಂದರು.
ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ 29 ಕೋಟಿ ರೂ., ಮೃಗಾಲಯ ಪ್ರಾಧಿಕಾರದಿಂದ 6 ಕೋಟಿ ರೂ. ಹಾಗೂ ಇನ್ಫೋಸಿಸ್ ಸಂಸ್ಥೆಯ 3.20 ಕೋಟಿ ರೂ. ನೆರವಿನಿಂದ ಇಂದಿಲ್ಲಿ ಸುಂದರ ಮೃಗಾಲಯ ಸ್ಥಾಪನೆಯಾಗಿದೆ. ಕಲಬುರಗಿ ಮೃಗಾಲಯ ರಾಜ್ಯದ 9ನೇ ಮೃಗಾಲಯವಾಗಿದ್ದು, ದೇಶದಲ್ಲಿ ಮೃಗಾಲಯ ಸಂಖ್ಯೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದ ಅವರು, 2022ರ ಪ್ರಾಣಿ ಜನಗಣತಿ ಪ್ರಕಾರ ರಾಜ್ಯದಲ್ಲಿ 6,395 ಆನೆ, 563 ಹುಲಿಗಳಿವೆ ಎಂದರು.
ನೂತನ ಮೃಗಾಲಯದಲ್ಲಿ 56 ವಿವಿಧ ಪ್ರಭೇದದ ಪ್ರಾಣಿ-ಪಕ್ಷಿಗಳು ವೀಕ್ಷಣೆಗೆ ಲಭ್ಯ ಇರಲಿವೆ. ಎರಡು ಸಿಂಹಗಳನ್ನು ಬನ್ನೇರುಘಟ್ಟದಿಂದ ಈಗಾಗಲೇ ತರಲಾಗಿದೆ. ಮೊಸಳೆ, ನರಿ, ಇತ್ಯಾದಿ ಪ್ರಾಣಿಗಳು ನೋಡಲು ಸಿಗುತ್ತಿವೆ. ಮುಂಬರುವ ದಿನಗಳಲ್ಲಿ ಬೇರೆ ಬೇರೆ ಪ್ರಭೇದ ಪ್ರಾಣಿ, ಪಕ್ಷಿಗಳನ್ನು ತರಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಸಮೀಪದ ಚಿಂಚೋಳಿ ವನ್ಯಜೀವಿ ಧಾಮ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು. ಈಗಾಗಲೆ ಅಲ್ಲಿ ಬೋಟಿಂಹ್, ಸಫಾರಿಗೆ ಚಾಲನೆ ನೀಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗಿದೆ ಎಂದರು.
*ಕಕ ಭಾಗದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಅಗತ್ಯ ಕ್ರಮ*
ಕಲ್ಯಾಣ ಕರ್ನಾಟಕ ಭಾಗದಲಭ್ಯ ಹಸಿರು ಹೊದಿಕೆ ಕೊರತೆ ಇದೆ. ಕಲಬುರಗಿ, ಬೀದರ ಯಾದಗಿರಿ, ರಾಯಚೂರು ಹೀಗೆ ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಡಿಮೆ ಅರಣ್ಯ ಪ್ರದೇಶ ಹೊಂದಿದೆ. ಹೀಗಾಗಿ, ಹವಾಮಾನದಲ್ಲಿ ವೈಪರಿತ್ಯಗಳಾಗುತ್ತಿದೆ. ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಈ ಬಗ್ಗೆ ಕೆ.ಕೆ.ಆರ್.ಡಿ.ಬಿ ಸಭೆಯಲ್ಲಿ ಚರ್ಚಿಸಿ ಅಗತ್ಯ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಳೆದ ಮೂರು ವರ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 11 ಲಕ್ಷ ಸಸಿ ನೆಡಲಾಗಿದೆ. ಅವುಗಳನ್ನು ಸುಮಾರು ಶೇ.80 ನೆಟ್ಟ ಸಸಿಗಳು ಬದುಕುಳಿದಿವೆ. ಈ ತರಹದ ಸಸಿಗಳಿಗೆ ಅಗತ್ಯ ಪ್ರಮಾಣ ನೀರು ಒದಗಿಸಿ ಐದು ವರ್ಷಗಳ ಕಾಲ ಸಂರಕ್ಷಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಅರಣ್ಯಇಲಾಖೆಯಲ್ಲಿ ಪಶುವೈದ್ಯಕೀಯ ಸಿಬ್ಬಂದಿ ಹೆಚ್ಚಿಸಲು ಸಿಎಂ ಅವರು ಅರಣ್ಯ ಇಲಾಖೆಗೆ ಅನುಮತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಗೆ ಅಗತ್ಯವಿರುವ ಸಿಬ್ಬಂದಿ ನೇಮಕಾತಿಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಸಚಿವರು ಪ್ರಶ್ನೆ ಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
*ಅರಣ್ಯ ಭೂಮಿ ಒತ್ತುವರಿ ತೆರವಿಗೆ ಕ್ರಮ*
ರಾಜ್ಯದ ಅರಣ್ಯ ಭೂಮಿ ತೆರವಿಗೆ ಕ್ರಮವಹಿಸಲಾಗಿದ್ದು ರಾಜ್ಯದಲ್ಲಿ ಈಗಾಗಲೇ 10,000 ಕೋಟಿ ರೂ. ಮೌಲ್ಯದ ಬೆಂಗಳೂರು ಒಂದರಲ್ಲೇ 250 ಎಕರೆ ಅರಣ್ಯ ಭೂಮಿ ತೆರವು ಮಾಡಲಾಗಿದೆ. ಸುಮಾರು 1 ಕೋಟಿ ಎಕರೆ ಅರಣ್ಯ, ಕಂದಾಯ ಒತ್ತುವರಿ ಜಮೀನು ತೆರವು ಹಂತ ಹಂತವಾಗಿ ನಡೆಯಲಿದೆ. ಈ ವಿಚಾರದಲ್ಲಿ ಎಸ್.ಐ ಟಿ. ರಚಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಅದರಂತೆ ಕ್ರಮ ವಹಿಸಲಾಗುತ್ತದೆ ಎಂದು ಖಂಡ್ರೆ ಹೇಳಿದರು.
*ಬೆಳಿಗ್ಗೆ 9.30 ರಿಂದ ಸಂಜೆ 5.30 ವೀಕ್ಷಣೆಗೆ ಲಭ್ಯ:*
ಮೃಗಾಲಯವು ಬೆಳಿಗ್ಗೆ 9.30 ರಿಂದ ಸಂಜೆ 5.30 ವರೆಗೆ ತೆರೆಯಲಿದ್ದು, ಪ್ರಾಣಿ-ಪಕ್ಷಿಗಳ ವೀಕ್ಷಣೆಗೆ ಲಭ್ಯವಾಗಿರಲಿದೆ. ಪ್ರತಿ ಮಂಗಳವಾರ ರಜೆ ಇರಲಿದೆ. 12 ವರ್ಷ ಮೇಲ್ಪಟ್ಟವರಿಗೆ 75 ರೂ., 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 40 ರೂ. ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 25 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಮೃಗಾಲಯದ ಟಿಕೆಟ್ ಕೌಂಟರ್ನಲ್ಲಿಯೆ ಟಿಕೆಟ್ ಪಡೆದು ವೀಕ್ಷಣೆ ಮಾಡಬಹುದಾಗಿದೆ.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ.ರಂಗಸ್ವಾಮಿ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಬಿ.ಜಿ.ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ, ಕೆ.ಕೆ.ಆರ್.ಟಿ.ಸಿ. ಅಧ್ಯಕ್ಷ ಅರುಣಕುಮಾರ ಪಾಟೀಲ, ಕಲಬುರಗಿ ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣಕುಮಾರ ಮೋದಿ, ಅರಣ್ಯ ಪಡೆ ಮುಖ್ಯಸ್ಥರು ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮೀನಾಕ್ಷಿ ನೇಗಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ ಪುಷ್ಕರ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವಿಶಂಕರ ಎಸ್. ಎಸ್., ಕಲಬುರಗಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನುವಾಸುಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ಮಹಾನಗರ ಪಾಲಿಕೆ ಡಿ.ಸಿ.ಎಫ್ ಸುಮಿತ್ ಪಾಟೀಲ, ಇನ್ಫೋಸಿಸ್ ಸಂಸ್ಥೆಯ ಪ್ರತಿನಿಧಿ ಪ್ರಿಯಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಸವರಾಜ ಎಸ್. ಡಾಂಗೆ, ಸುನೀಲಕುಮಾರ್, ವಲಯ ಅರಣ್ಯಾಧಿಕಾರಿಗಳಾದ ನಾಗೇಶ, ವಿಜಯ ಕುಮಾರ ಸೇರಿದಂತೆ ಅರಣ್ಯ ಇಲಾಖೆಯ ಅನೇಕ ಅಧಿಕಾರಿ-ಸಿಬ್ಬಂದಿಗಳಿದ್ದರು.