ಸೇವೆ ಖಾಯಂಗಾಗಿ ಪಾಲಿಕೆ ಮುಂದೆ ಪೌರ ಕಾರ್ಮಿಕರ ಬೃಹತ್ ಪ್ರತಿಭಟನೆ

 

ಕಲಬುರ್ಗಿ, ಜೂ.೧೮- ಮಹಾನಗರ ಪಾಲಿಕೆಯ ಎಲ್ಲ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕಾಗಿ ಗುರುವಾರ ಬೆಳಿಗ್ಗೆ ಮಹಾನಗರ ಪಾಲಿಕೆಯ ಮುಂದೆ ಕರ್ನಾಟಕ ರಾಜ್ಯ ಮುನಸಿಪಲ್ ನೌಕರರ ಸಂಘದ ನೇತೃತ್ವದಲ್ಲಿ ಪೌರ ಕಾರ್ಮಿಕರು ಬೃಹತ್ ಪ್ರತಿಭಟನೆ ಮಾಡಿದರು.

ಗೌರವಾಧ್ಯಕ್ಷೆ ಶ್ರೀಮತಿ ಕೆ. ನೀಲಾ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಗಪ್ಪ ರಾಯಚೂರಕರ್, ಸುಧಾಮ್ ಧನ್ನಿ, ಪಾಂಡುರAಗ್ ಮಾವಿನಕರ್, ಶ್ರೀಮಂತ ಬಿರಾದಾರ್, ಡಾ, ಮೀನಾಕ್ಷಿ ಬಾಳಿ, ಲವಿತ್ರ, ಇಮಾಮಸಾಬ್ ನದಾಫ್, ಚಂದಮ್ಮ ಗೋಳಾ, ಲೋಹಿತ್, ಕಮಲಾಬಾಯಿ, ಕವಿತಾ, ವೈಶಾಲಿ, ಶರಣು ಅತನೂರ್, ಸುಂದ್ರಮಾಬಾಯಿ, ಅಂಬಮ್ಮ, ಎಂ.ಬಿ. ಸಜ್ಜನ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರತಿಭಟನೆಕಾರರು ನಂತರ ಮಹಾನಗರ ಪಾಲಿಕೆಯ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕರ್ನಾಟಕ ರಾಜ್ಯದ ಎಲ್ಲ ಮುನಸಿಲ್ ನೌಕರರನ್ನು ನೇರ ಪೌವತಿಯಲ್ಲಿ ಮತ್ತು ನೇರ ನೇಮಕಾತಿಯಲ್ಲಿ ಹಂತಹAತವಾಗಿ ತರುವಂತೆ ಕರ್ನಾಟಕ ಸರ್ಕಾರವು ತೀರ್ಮಾನ ಮಾಡಿದೆ. ಮತ್ತು ರಾಜ್ಯದ ಎಲ್ಲೆಡೆ ಗುತ್ತೆದಾರಿ ಪದ್ಧತಿಯನ್ನು ನಿಲ್ಲಿಸಲಾಗಿದೆ. ಆದರೆ ಕಳೆದ ವರ್ಷದವರೆಗೂ ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಪದ್ಧತಿಯು ಚಾಲ್ತಿಯಲ್ಲಿದ್ದು ಮುನಸಿಪಲ್ ನೌಕರರು ಗುತ್ತಿಗೆ ಪದ್ಧತಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗುತ್ತಿಗೆ ಪದ್ಧತಿ ತಡೆಗಾಗಿ, ನೇರ ಪಾವತಿಗಾಗಿ, ಎಲ್ಲ ನೌಕರರ ಖಾಯಮಾತಿಗಾಗಿ ಮತ್ತು ಎಲ್ಲ ಮುನಸಿಪಲ್ ನೌಕರರಿಗಾಗಿ ಇರುವ ಸೌಲಭ್ಯಗಳಿಗಾಗಿ ಸುದೀರ್ಘ ಹೋರಾಟ ನಡೆಸಲಾಗಿತ್ತು. ಅನೇಕ ತಾಂತ್ರಿಕ ಅಡೆ ತಡೆಗಳನ್ನು ಉಂಟು ಮಾಡಿ ನೌಕರರನ್ನು ಗುತ್ತಿಗೆದಾರರ ಅಡಿಯಲ್ಲಿ ದೂಡಲಾಗಿತ್ತು ಮತ್ತು ಎಲ್ಲರಿಗೂ ದೊರೆಯಬೇಕಾದ ಸೌಲಭ್ಯಗಳನ್ನು ದೊರೆಯದಂತೆ ಮತ್ತು ನೇರ ಪಾವತಿ, ಖಾಯಮಾತಿಯಡಿ ಬರದಂತೆ ನೋಡಿಕೊಳ್ಳಲಾಗಿತ್ತು. ಹಿಂದೆ ಜಿಲ್ಲಾಧಿಕಾರಿಗಳು ತಾವೇ ಹೊರಡಿಸಲಾದ ಆದೇಶವನ್ನು ತಾವೇ ರದ್ದುಗೊಳಿಸಿಲಾಗಿತ್ತು. ಇದೆಲ್ಲದರಿಂದ ಅಂತಿಮವಾಗಿ ಹಾನಿಯಾಗಿದ್ದು ಮುನಸಿಪಲ್ ನೌಕರರಿಗೆ. ಕಳೆದ ವರ್ಷದಲ್ಲಿ ೯೩೬ ಜನ ಮುನಸಿಪಲ್ ನೌಕರರನ್ನು ನೇರ ಪಾವತಿಯಡಿಯಲ್ಲಿ ಪರಿಗಣಿಸಿ ಆದೇಶ ಹೊರಡಿಸಲಾಗಿದೆ. ಸರಿಸುಮಾರು ಒಂದು ವರ್ಷವಾಯಿತು. ಅವರೆಲ್ಲರನ್ನೂ ಖಾಯಂಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಈಗಾಗಲೆ ಅನೇಕ ಕಾರಣಗಳನ್ನು ಮುಂದೆ ಮಾಡಿ ಜೀವಮಾನ ಪೂರ್ತಿ ರಸ್ತೆ ಚರಂಡಿ ಸ್ವಚ್ಛತೆಯಲ್ಲಿ ತೊಡಗಿದ ಪೌರ ಕಾರ್ಮಿಕರನ್ನು ಎಲ್ಲ ಸೌಲಭ್ಯಗಳಿಂದ ವಂಚಿಸಲಾಗಿದೆ. ಮತ್ತು ಖಾಯಮ್ಮಾತಿ ದೊರೆಯದಂತೆ ನೋಡಿಕೊಳ್ಳಲಾಗಿದೆ. ಇದು ಬಹುದೊಡ್ಡ ಮೋಸವೆಂದೇ ಸಂಘಟನೆಯು ಪರಿಗಣಿಸುತ್ತದೆ. ಆದ್ದರಿಂದ ಈಗಲಾದರೂ ಕೂಡಲೇ ಅವರನ್ನು ಖಾಯಮ್ ಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿ ಭಾನುವಾರವೂ ವೇತನ ಸಹಿತ ರಜೆಯಾಗಿರುತ್ತದೆ. ಅದನ್ನು ಜಾರಿಗೊಳಿಸಬೇಕು. ಭಾನುವಾರದ ರಜೆಯ ವೇತನ ಕಡಿತ ಮಾಡಿದ್ದಲ್ಲಿ ಅದನ್ನು ಮರುಪಾವತಿಸಬೇಕು. ಈಚೆಗೆ ಬಿಸಿಲಿನ ತಾಪದಿಂದ ಪೌರಕಾರ್ಮಿಕ ಮಹಿಳೆಯ ಸಾವು ಆಗಿದೆ. ಭವಿಷ್ಯದಲ್ಲಿ ಇಂತಹ ಅಪಾಯವನ್ನು ತಡೆಯಲು ಮಾರ್ಚ್ ೧ರಿಂದ ಜೂನ್ ೧೫ರವರೆಗೆ ಶುದ್ದ ಕುಡಿಯುವ ನೀರು, ಬೆಳಗಿನ ಹಾಜರಾತಿಯ ಸಹಿಯ ನಂತರ ಒಂದು ಗ್ಲುಕೋಡ್ ಪಾಕೆಟ್ ವಿತರಿಸಲು ಸಾಧ್ಯವಾಗಬೇಕು. ಹಾಗೆಯೇ ಪ್ರತಿ ವರ್ಷ ಒಂದು ಉತ್ತ ಗುಣಮಟ್ಟದ ಸ್ಟೀಲ್ ನೀರಿನ ಬಾಟಲ್ ಅನ್ನು ವಿತರಿಸಬೇಕು. ಬಿಸಲರಿ ಬಾಟಲಿಗಳನ್ನು ಮರು ಬಳಕೆ ಮಾಡದಂತೆ ನೋಡಿಕೊಳ್ಳಬೇಕು. ಕೆಲಸದ ಸಮಯವನ್ನು ಪುನರ್ ಪರಿಶೀಲಿಸಿ ಬಿಸಿಲು ಜೋರಾಗುವ ಮುನ್ನವೇ ಕೆಲಸದ ಅವಧಿ ಪೂರೈಕೆಯಾಗುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸ್ವಚ್ಛಗೊಳಿಸಿದ ಪೌಷ್ಟಿಕಯುಕ್ತ ಆಹಾರವನ್ನು ಒದಗಿಸಬೇಕು. ತಿಂಗಳ ಋತುಸ್ರಾವದ ಸಂದರ್ಭದಲ್ಲಿ ಬಳಸುವ ಉತ್ತಮ ಗುಣಮಟ್ಟದ ಶುಚಿ ಪ್ಯಾಡಗಳನ್ನು ಒದಗಿಸಬೇಕು. ವೈದ್ಯಕೀಯ ಉಚಿತ ತಪಾಸಣೆಯೊಂದಿಗೆ ಅಗತ್ಯದ ಉಪಕರಣಗಳನ್ನು ಉಚಿತವಾಗಿ ಒದಗಿಸಬೇಕು. ಕನ್ನಡಕ, ಹಲ್ಲಿನ ಸೆಟ್, ಮೊಳಕಾಲು ಮಂಡಿ ಚಿಪ್ಪು, ಶ್ರವಣ ಸಾಧನ ಉಪಕರಣಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

ಕಸ ತೆಗೆಯಲು ಬಳಸುವ ಕಸಬರಿಗೆಗಳನ್ನು ಈವರೆಗೆ ಪೌರ ಕಾರ್ಮಿಕರೇ ಹಣ ಹಾಕಿ ಹೊಂದಿಸುತ್ತಿರುವರು. ಇದು ಅವರಿಗೆ ಆರ್ಥಿಕ ಹೊರೆಯೇ ಆಗಿದೆ. ಆದ್ದರಿಂದ ಮಹಾನಗರ ಪಾಲಿಕೆಯೇ ಕಸಬರಿಗೆಗಳನ್ನು ಮತ್ತಿತರ ಉಪಕರಣಗಳನ್ನು ಒದಗಿಸಲು ಸಾಧ್ಯವಾಗಬೇಕು. ಅಥವ ಅದಕ್ಕೆ ತಗುಲುವ ವೆಚ್ಚವನ್ನು ಪಾವತಿಸಬೇಕು. ಪೌರ ಕಾರ್ಮಿಕರಿಗೆ, ಮಕ್ಕಳಿಗೆ ಮತ್ತು ಅವರ ಕುಟುಂಬಕ್ಕೆ ದೊರೆಯುವ ಎಲ್ಲ ಸೌಲಭ್ಯಗಳನ್ನು ಪಡೆಯಲು ಆನ್ಸೆನ್ ಅರ್ಜಿ ಗುಜರಾಯಿಸಲು ಇತ್ಯಾದಿ ಸೌಲಭ್ಯದ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ಆವರಣದಲ್ಲಿಯೇ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಮೇ ೧ರಂದು ಕಾರ್ಮಿಕರ ದಿನಾಚರಣೆಯಂದು ಜಗತ್ತಿನೆಲ್ಲೆಡೆ ರಜೆಯನ್ನು ಕೊಡಲಾಗುತ್ತಿದೆ. ಆದಾಗ್ಯೂ, ಮಹಾನಗರ ಪಾಲಿಕೆಯಲ್ಲಿ ರಜೆ ಕೊಟ್ಟಿಲ್ಲ. ಮುಂದೆ ಕೊಡುವುದಾಗಿ ಹೇಳುತ್ತಿದ್ದಾರೆ ಎಂದು ದೂರಿದ ಅವರು, ಕೂಡಲೇ ಮೇ ದಿನದ ರಜೆಯನ್ನು ಪೌರ ಕಾರ್ಮಿಕರಿಗೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು

Share This Article
Leave a Comment