ಕಲಬುರ್ಗಿ- ಬೆಂಗಳೂರು ವಿಮಾನಯಾನ ಪುನರಾರಂಭಕ್ಕೆ ಕ್ರಮ: ಡಾ. ಅಜಯಸಿಂಗ್.

 

ಕಲಬುರ್ಗಿ, ಮೇ.೧೧- ಜಿಲ್ಲೆಯ ಜನತೆಯ ಬಹುದಿನದ ಬೇಡಿಕೆಯಾದ ಕಲಬುರ್ಗಿ-ಬೆಂಗಳೂರು ನಡುವಿನ ವಿಮಾನಯಾನ ಸೇವೆಯನ್ನು ಪುನಾರಂಭಿಸಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಅವರು ತಿಳಿಸಿದ್ದಾರೆ.

ವಾಣಿಜ್ಯ ಕಾರಣಗಳಿಂದ ಸ್ಥಗಿತಗೊಂಡಿದ್ದ ಈ ಮಾರ್ಗದ ಕಾರ್ಯಾಚರಣೆಗೆ ಜೀವ ತುಂಬಲು ವೈಯಬಿಲಿಟಿ ಗ್ಯಾಪ್ ಫಂಡಿಂಗ (ವಿಜಿಎಪ್) ಯೋಜನೆಯಡಿ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ಸ್ಥಗಿತಗೊಂಡಿರುವ ಕಲಬುರಗಿ ಹಾಗೂ ಬೆಂಗಳೂರು ನಡುವಿನ ವಿಮಾನ ಸೇವೆ ಪುನಾರಂಭಗೊಳ್ಳಲು ಎಲ್ಲ ರೀತಿಯ ಸಿದ್ದತೆಗಳು ನಡೆದಂತಾಗಿದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಪಂಚಾಯತ್ ರಾಜ್ ಮತ್ತು ಐ.ಟಿ. ಇಲಾಖೆಯ ಮಂತ್ರಿಗಳು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಮಂತ್ರಿಗಳು, ಪೌರಾಡಳಿತ ಮತ್ತು ಹಜ್ ಇಲಾಖೆಯ ಮಂತ್ರಿಗಳ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ವಿಮಾನಯಾನ ಸಂಸ್ಥೆಗಳು ಪ್ರತಿದಿನ ಕಾರ್ಯಾಚರಣೆ ನಡೆಸಲು ಆಸಕ್ತಿ ತೋರಿದ್ದು, ಇದಕ್ಕಾಗಿ ವರ್ಷಕ್ಕೆ ಅಂದಾಜು ೧೨.೫೦ ಕೋಟಿ ರೂ.ಗಳ ಆರ್ಥಿಕ ಬೆಂಬಲದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆಗಳಿಗೆ ನೀಡಬೇಕಾದ ಈ ಮೊತ್ತದಲ್ಲಿ ಸಿಂಹಪಾಲು ಅಂದರೆ ಶೇಕಡಾ ೮೦ರಷ್ಟನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಭರಿಸಲಿದ್ದು, ಉಳಿದ ಶೇಕಡಾ ೨೦ ರಷ್ಟನ್ನು ರಾಜ್ಯ ಸರ್ಕಾರ ನೀಡಲಿದೆ. ಈಗಾಗಲೇ ಬೀದರ್-ಬೆಂಗಳೂರು ಮಾರ್ಗಕ್ಕಾಗಿ ೨೦೨೫-೨೬ನೇ ಸಾಲಿನಲ್ಲಿ ೧೨.೨೦ ಕೋಟಿ ರೂಪಾಯಿಗಳನ್ನು ಮಂಡಳಿಯಿಂದ ಮಂಜೂರು ಮಾಡಲಾಗಿದ್ದು, ಇದೇ ಮಾದರಿಯಲ್ಲಿ ಕಲಬುರ್ಗಿ ಮಾರ್ಗಕ್ಕೂ ಅನುದಾನ ಒದಗಿಸಲು ಮಂಡಳಿಯ ಕ್ರಿಯಾ ಯೋಜನೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಲಬುರ್ಗಿ ವಿಮಾನ ನಿಲ್ದಾಣವು ಕೇವಲ ಜಿಲ್ಲೆಗೆ ಮಾತ್ರವಲ್ಲದೆ, ಸುತ್ತಮುತ್ತಲಿನ ಆರು ಜಿಲ್ಲೆಗಳು ಹಾಗೂ ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣದ ಪ್ರಯಾಣಿಕರಿಗೂ ಆಸರೆಯಾಗಿದೆ. ಇಲ್ಲಿ ಏರ್ಬಸ್ ೩೨೦ ಹಾಗೂ ಬೋಯಿಂಗ್-೭೩೭ ನಂತಹ ಬೃಹತ್ ವಿಮಾನಗಳ ಸಂಚಾರಕ್ಕೆ ಬೇಕಾದ ಅತ್ಯಾಧುನಿಕ ಮೂಲಸೌಕರ್ಯಗಳಿವೆ. ಆದರೆ, ಈ ಹಿಂದೆ ಸೇವೆ ನೀಡುತ್ತಿದ್ದ ಘೋಡಾವತ್ ಸಂಸ್ಥೆಯು ಪ್ರಯಾಣಿಕರ ಕೊರತೆ ಮತ್ತು ಆರ್ಥಿಕ ನಷ್ಟದ ಕಾರಣ ನೀಡಿ ಕಳೆದ ೨೦೨೫ರ ಅಕ್ಟೋಬರ್ ೧೫ರಿಂದ ಸೇವೆಯನ್ನು ಸ್ಥಗಿತಗೊಳಿಸಿತ್ತು ಎಂದು ಅವರು ತಿಳಿಸಿದ್ದಾರೆ.

ಸರ್ಕಾರ ಹಾಗೂ ಕೆಕೆಆರ್‌ಡಿಬಿಯ ಸಹಯೋಗದಲ್ಲಿ ವಿಮಾನಯಾನ ಸಂಸ್ಥೆಗಳು ಪ್ರತಿದಿನ ಕಾರ್ಯಾಚರಣೆ ನಡೆಸಲು ಇದಕ್ಕಾಗಿ ವರ್ಷಕ್ಕೆ ಅಂದಾಜು ೧೨.೫೦ ಕೋಟಿ ರೂ.ಗಳ ಆರ್ಥಿಕ ಬೆಂಬಲದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈ ನಿರ್ಧಾರದಿಂದಾಗಿ ಕಲಬುರಗಿ ಮತ್ತು ಬೆಂಗಳೂರು ನಡುವೆ ಶೀಘ್ರದಲ್ಲೇ ಪ್ರತಿನಿತ್ಯ ವಿಮಾನ ಸಂಚಾರ ಆರಂಭವಾಗುವ ನಿರೀಕ್ಷೆಯಿದ್ದು, ಇದು ಈ ಭಾಗದ ಕೈಗಾರಿಕಾ ಮತ್ತು ಶೈಕ್ಷಣಿಕ ಪ್ರಗತಿಗೆ ಹೊಸ ವೇಗ ನೀಡಲಿದೆ ಎಂದು ಡಾ. ಅಜಯ್ ಸಿಂಗ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share This Article
Leave a Comment