ಕಲಬುರ್ಗಿ, ಜೂ.೧೫- ಕರ್ನಾಟಕದ ೧೯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗಾಗಿ ಸಮಾಂತರ ಪರವಾನಗಿ ಕೋರಿ ಟಾಟಾ ಪವರ್ ಸಂಸ್ಥೆಯು ಕೆಇಆರ್‌ಸಿಗೆ ಸಲ್ಲಿಸಿರುವ ಪ್ರಸ್ತಾವನೆಗೆ ಯಾವುದೇ ಕಾರಣಕ್ಕೂ ಅನುಮೋದನೆ ನೀಡಬಾರದು ಎಂದು ಸೋಮವಾರ ಜೆಸ್ಕಾಂ ನೌಕರರ ಸಂಘದ ಉಪಾಧ್ಯಕ್ಷರು, ಕಾರ್ಯನಿರ್ವಾಹಕ ಇಂಜಿನಿಯರ್ಸ್ಗಳು, (ಇಇ), ಅಧೀಕ್ಷಕ ಇಂಜಿನಿಯರ್‌ಗಳು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು ಹಾಗೂ ಸಮಸ್ತ ಸಿಬ್ಬಂದಿ ವರ್ಗದವರು ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ್ ಅವರನ್ನು ಭೇಟಿ ಮಾಡಿ ಅಧಿಕೃತವಾಗಿ ಮನವಿ ಸಲ್ಲಿಸಿದರು.
ಸಂಸ್ಥೆಯ ಹಿತ ಕಾಯುವಲ್ಲಿ ಮತ್ತು ನೌಕರರ ಭವಿಷ್ಯದ ರಕ್ಷಣೆಯಲ್ಲಿ ಜೆಸ್ಕಾಂ ಅಧ್ಯಕ್ಷನಾಗಿ ನಾನು ಸದಾ ನಿಮ್ಮೊಂದಿಗಿರುತ್ತೇನೆ ಎಂದು ಸಿಬ್ಬಂದಿ ವರ್ಗಕ್ಕೆ ಪ್ರವೀಣ್ ಪಾಟೀಲ್ ಹರವಾಳ್ ಅವರು ಭರವಸೆ ನೀಡಿದರು. ನಮ್ಮ ಹೆಮ್ಮೆಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿತದೃಷ್ಟಿಯಿಂದ, ನ್ಯಾಯಯುತ ಬೇಡಿಕೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹಾಗೂ ಇಂಧನ ಸಚಿವ ಕೆ. ಜೆ. ಜಾರ್ಜ್ ಗಮನಕ್ಕೆ ತಂದು ಸೂಕ್ತವಾಗಿ ಚರ್ಚಿಸಲಾಗುವುದು. ಸಾರ್ವಜನಿಕರ ಮತ್ತು ನೌಕರರ ಹಿತರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.