ಕಲಬುರ್ಗಿ, ಮೇ.೨೯- ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ರಾಜ್ಯದ ನೂತನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಬೇಕು ಎಂದು ನೇಕಾರ ಸಮಾಜದ ಅಭಿನವ ರೇವಣಸಿದ್ಧ ಪಟ್ಟದ್ದೇವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಯವರು ಎಲ್ಲ ಸಮುದಾಯಗಳ, ವಿಶೇಷವಾಗಿ ಹಿಂದುಳಿದ, ವಂಚಿತ ಹಾಗೂ ದುರ್ಬಲ ವರ್ಗಗಳ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಗಮನಾರ್ಹವಾದ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ನೇಕಾರ ಸಮುದಾಯದ ಕಲ್ಯಾಣ, ಅಭಿವೃದ್ಧಿ ಹಾಗೂ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಕಾಳಜಿ ವಹಿಸಿ, ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸಲು ನಿರಂತರವಾಗಿ ಶ್ರಮಿಸಿದ್ದಾರೆ. ಹಾಗೂ ಜಾತಿ ವ್ಯವಸ್ಥೆ ಯ ಬಗೆ. ಅವರಿಗೆ ಸಮಗ್ರ ಕರ್ನಾಟಕದ ಭೌಗೋಳಿಕ ಪರಿಸ್ಥಿತಿ, ಸಾಮಾಜಿಕ ರಚನೆ ಹಾಗೂ ಜಾತಿ ಜ್ಞಾನವಿದ್ದು, ರಾಜ್ಯದ ವಿವಿಧ ಭಾಗಗಳ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಕೊಂಡು ಪರಿಹರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಬಣ್ಣಿಸಿದರು.
ಪ್ರಿಯಾಂಕ್ ಖರ್ಗೆಯವರು ಯುವಕರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಯುವ ಸಮುದಾಯದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಪರಿಹಾರ ಕಂಡುಹಿಡಿಯಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಸಚಿವಾಲಯಗಳು ಮತ್ತು ಪ್ರಮುಖ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಅನುಭವವು ಅವರ ಆಡಳಿತಾತ್ಮಕ ಸಾಮರ್ಥ್ಯ, ನಾಯಕತ್ವದ ಗುಣಗಳು ಹಾಗೂ ಸಾರ್ವಜನಿಕ ಸೇವೆಯ ಮೇಲಿನ ಬದ್ಧತೆಯನ್ನು ಸಾಬೀತುಪಡಿಸಿದೆ. ಸಮಗ್ರ ಅಭಿವೃದ್ಧಿ, ಸಾಮಾಜಿಕ ನ್ಯಾಯ ಹಾಗೂ ಜನಪರ ಆಡಳಿತದ ಬಗ್ಗೆ ಅವರ ದೃಷ್ಟಿಕೋನವು ಅವರನ್ನು ಉನ್ನತ ಜವಾಬ್ದಾರಿಗಳಿಗೆ ಅತ್ಯಂತ ಸೂಕ್ತ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು.
ಪ್ರಿಯಾಂಕ್ ಖರ್ಗೆಯವರು ಉಪ ಮುಖ್ಯಮಂತ್ರಿ ಆದಲ್ಲಿ ಕೇವಲ ಜಿಲ್ಲೆ ಅಲ್ಲದೆ ಇಡಿ ಕಲ್ಯಾಣ ಕರ್ನಾಟಕ ಮತ್ತು ಕರ್ನಾಟಕ ರಾಜ್ಯದಾದ್ಯಂತ ಅಭಿವೃದ್ಧಿಯ ಪರ್ವಕ್ಕೆ ನಾಂದಿ ಹಾಡಿದಂತಾಗುತ್ತದೆ ಹಾಗೂ ಯುವ ತಲೆಮಾರಿಗೆ ಹೊಸ ನಾಯಕತ್ವದ ಜವಾಬ್ದಾರಿಯನ್ನು ಮುನ್ನಡೆಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹೈದ್ರಾಬಾದ್ ಅಖಿಲ ಭಾರತ ಪದ್ಮಶಾಲಿ ಸಂಘ ಹಾಗೂ ಕರ್ನಾಟಕ ರಾಜ್ಯ ಕಾಯಕ ಶರಣ ಸಮೂಹಗಳ ಒಕ್ಕೂಟದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಗಣೇಶ್ ಸಂಗಾ ಅವರು ಮಾತನಾಡಿ, ನೇಕಾರ ಸಮುದಾಯ ಸೇರಿದಂತೆ ರಾಜ್ಯದ ಎಲ್ಲ ವರ್ಗಗಳ ಮುಖ್ಯವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಬಗ್ಗೆ ಪ್ರಿಯಾಂಕ್ ಖರ್ಗೆ ಅವರಿಗಿರುವ ಕಾಳಜಿ, ಯುವಕರೊಂದಿಗೆ ಹೊಂದಿರುವ ನಿಕಟ ಸಂಪರ್ಕ, ಆಡಳಿತಾತ್ಮಕ ಅನುಭವ ಹಾಗೂ ಸಮಾಜಮುಖಿ ದೃಷ್ಟಿಕೋನವು ಅವರನ್ನು ಕರ್ನಾಟಕದ ಉಪ ಮುಖ್ಯಮಂತ್ರಿ ಹುದ್ದೆಗೆ ಅತ್ಯಂತ ಸಮರ್ಥ ಅಭ್ಯರ್ಥಿಯನ್ನಾಗಿ ಮಾಡುತ್ತದೆ. ಹಾಗಾಗಿ ನೇಕಾರ ಸಮುದಾಯ ಅಲ್ಲದೆ ಎಲ್ಲ ಹಿಂದುಳಿದ ವರ್ಗದ ಸಮಾಜಗಳ ಪರವಾಗಿ ಹಾಗೂ ಎಲ್ಲ ಮಠಾಧೀಶರರು ಪರವಾಗಿ, ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಹುದ್ದೆಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ಹೆಳವರ್, ಮಹಾರುದ್ರಪ್ಪ ಕಂಬಾರ್, ಮಲ್ಲಿಕಾರ್ಜುನ್ ಸೂರ್ಯವಂಶಿ, ಆನಂದ್, ಪ್ರಕಾಶ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.