ಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ ಶಹಾಪುರದಲ್ಲಿ ಮೇ ೧೫ರಂದು ಶರಣರ ಜಾಗೃತಿ ಸಮಾವೇಶ.

 

ಕಲಬುರ್ಗಿ, ಮೇ.೧೧- ಕನ್ಹೇರಿ ಮಠದ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ ಶಹಾಪುರದ ಹಳೆಯ ಬಸ್ ನಿಲ್ದಾಣದ ಎದುರಿನ ಶಾಲಾ ಮೈದಾನದಲ್ಲಿ ಮೇ ೧೫ರಂದು ಸಂಜೆ ಐದು ಗಂಟೆಗೆ ಬಸವಾದಿ ಶರಣರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಪ್ರಗತಿಪರ ಚಿಂತಕಿ ಡಾ. ಮೀನಾಕ್ಷಿ ಬಾಳಿ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ಸಿದ್ದಾಂತಗಳು ಸಮಾನತೆಯ ಪ್ರತೀಕವಾಗಿದ್ದವು. ಹಿಂದೂತ್ವದ ಹಿನ್ನೆಲೆಯು ಅಸಮಾನತೆಯನ್ನು ಬಿಂಬಿಸುತ್ತದೆ, ಅಸ್ವೃಶ್ಯತೆಗೆ ಕುಮ್ಮಕ್ಕು ಕೊಡುತ್ತಿದೆ. ಸ್ವಾತಂತ್ರö್ಯ ವಿರೋಧಿಯಾಗಿದೆ. ಮತಾಂಧವಾಗಿದೆ. ಇಂತಹ ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸಿ ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಅವರ ಹೆಸರಿನಲ್ಲಿ ಹಿಂದೂತ್ವದ ಸಮಾವೇಶ ಹಮ್ಮಿಕೊಂಡಿರುವುದು ಖಂಡನಾರ್ಹ ಎಂದು ಆಕ್ಷೇಪಿಸಿದರು.

ಪ್ರಾದೇಶಿಕವಾಗಿ ಇಲ್ಲಿರುವ ಎಲ್ಲ ಮತ, ಪಂಥ, ಪರಂಪರೆಯವರು ಹಿಂದೂಸ್ಥಾನಿಗಳೆ, ಹಿಂದೂ ಎಂಬುದು ಪ್ರದೇಶವಾಚಕವೆ ಹೊರತು ಧರ್ಮ ಅಥವಾ ಸಂಸ್ಕೃತಿ ವಾಚಿಕವಲ್ಲ, ಹಿಳಿಸುವಾಗಲೂ ಬಹುಸಂಖ್ಯಾತ ದುಡಿಯುವ ಜನಸಮುದಾಯಗಳನ್ನು ತನ್ನ ರಾಜಕೀಯ ಅಜೆಂಡಾಕ್ಕೆ ಬಳಸಿಕೊಳ್ಳಲೆಂದು ಕೋಮುವಾದಿಗಳು ಇತ್ತೀಚೆಗೆ ಹಿಂದೂ ಹೆಸರಿನಲ್ಲಿ ವರ್ಣಾಶ್ರಮ ಪದ್ಧತಿಯನ್ನು ಪುನಃ ಪ್ರತಿಷ್ಠಾಪಿಸಲು ಹೊರಟಿದ್ದಾರೆ. ಅದರ ಭಾಗವಾಗಿಯ ಶಹಾಪೂರದಲ್ಲಿ ಬಸವಾದಿ ಶರಣ ಹಿಂದೂ ಸಮಾವೇಶ ಮಾಡಲು ಹೊರಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಸಲಿಗೆ ಅವರಿಗೆ ಬಸವಣ್ಣನವರ ಅಥವಾ ಶರಣರ ಬಗೆಗೆ ಭಕ್ತಿಯೂ ಇಲ್ಲ ಅಭಿಮಾನವಂತೂ ಮೊದಲೆ ಇಲ್ಲ, ಶರಣಾನುಯಾಯಿಗಳಾಗಿರುವ ಅಸಂಖ್ಯ ದುಡಿಯುವ ಜನರನ್ನು ತಮ್ಮತ್ತ ಸೆಳೆದುಕೊಳ್ಳುವ ಕುತಂತ್ರ ಇಂಥ ಸಮಾವೇಶಗಳು ಶರಣರು ಪುರಾತನರೆ ಹೊರತು ಸನಾತನಿಗಳಲ್ಲ. ಭಾರತದ ತುಂಬೆಲ್ಲಾ ಜನರು ಶರಣ ಸಿದ್ಧಾಂತ ಕುರಿತು ತೀವ್ರ ಜಿಜ್ಞಾಸೆಗೈಯುತ್ತಿದ್ದಾರೆ. ಇತ್ತೀಚೆಗೆ ಕಾಯ” ದಾಸೋಹ ತತ್ವಗಳು ಹೆಚ್ಚು ಪ್ರಚುರಗೊಂಡು ಕರ್ಮಸಿದ್ಧಾಂತ ಹಿನ್ನೆಲೆಗೆ ಸರಿಯುತ್ತಿದೆ. ಇದು ಅವರಲ್ಲಿ ನಡುಕ ಹುಟ್ಟಿಸಿದೆ. ಕರ್ನಾಟಕದ ಸರ್ಕಾರವು ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಕೂಡ ಕೋಮುವಾದಿಗಳಿಗೆ ಕಿರಿಕಿರಿಯನ್ನು ಮಾಡಿದೆ. ಬಸವಾದಿ ಶರಣರನ್ನು ನಿವಾರಿಸಿಕೊಳ್ಳಲು ಸಾಧ್ಯವಿಲ್ಲದ್ದರಿಂದ ಶರಣರ ತತ್ವಗಳನ್ನ ತಿರುಚಲು ಮುಂದಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಸವಣ್ಣನವರನ್ನು ಹಿಂದುತ್ವದ ಕೂಪದಲ್ಲಿ ಬೀಳಿಸಿ ಸಾಂಸ್ಕೃತಿಕ ನಾಯಕತ್ವವನ್ನು ವಿಕೃತಿಗೊಳಿಸಲು ಯತ್ನಿಸುತ್ತಿರುವ ಕೋಮುವಾದಿಗಳನ್ನು ತಡೆಗಟ್ಟುವುದು ಸರ್ಕಾರದ ಕರ್ತವ್ಯವಾಗಿದೆ ಅವರು ತೋಡಿದ ಖೆಡ್ಡಾಕ್ಕೆ ಭಾವುಕ ಮುಗ್ಧ ಅಸಂಖ್ಯಾತ ಜನರು ಬೀಳದಂತೆ ಎಚ್ಚರ ವಹಿಸಲೆಂದು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕದ ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ್, ವಿಜಯನಗರ ಜಿಲ್ಲೆಗಳಿಂದ ಬಸವಪರ ಸ್ವಾಮೀಜಿಗಳು, ಬಸವಾಭಿಮಾನಿ ಚಿಂತಕರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆರ್.ಜಿ. ಶೆಟಗಾರ್, ಅಶೋಕ್ ಘೂಳಿ, ರಾಜಶೇಖರ್ ಯಂಕAಚಿ, ಆರ್.ಕೆ. ಹುಡಗಿ, ಶಿವಶಂಕರ್ ದೇಗಾಂವ್, ರವೀಂದ್ರ ಶಾಬಾದಿ, ಬಸವರಾಜ್ ಕೋಣಿನ್,ಶಾಂತಪ್ಪ ಪಾಟೀಲ್, ಹಣಮಂತರಾವ್ ಪಾಟೀಲ್, ಭೀಮಣ್ಣ ಬೋನಾಳ್, ಸುಧಾಮ್ ಧನಿ, ಚಂದಮ್ಮ ಗೋಳಾ, ಲವಿತ್ರ ವಸ್ತçದ್, ದಯಾನಂದ್ ಯಂಕAಚಿ ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment