ಕಲ್ಲೂರಿನಲ್ಲಿ‌ ಶೀಲ‌ ಶಂಕಿಸಿ ಪತ್ನಿ ಹತ್ಯೆ ಮಾಡಿ ಪತಿ ಪರಾರಿ

ಜೇವರ್ಗಿ, ಜೂ.೧೧- ತಾಲ್ಲೂಕಿನ ಕಲ್ಲೂರ್ (ಕೆ) ಗ್ರಾಮದ ವ್ಯಕ್ತಿಯೊಬ್ಬ ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಯನ್ನು ಕೊಚ್ಚಿ ಗುರುವಾರ ಕೊಲೆ ಮಾಡಿ ಪರಾರಿಯಾಗಿದ್ದಾನೆ

ಮೃತಳನ್ನು ಶ್ರೀಮತಿ‌ ಸಿದ್ದಮ್ಮ ಗಂಡ ಭೂತಾಳಿ ನಾಯಕೋಡಿ (30) ಎಂದು ಗುರುತಿಸಲಾಗಿದೆ.

ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಪತಿ ಭೂತಾಳಿ ನಾಯ್ಕೋಡಿ (40) ಶಂಕಿಸುತ್ತಿದ್ದ. ಈ ವಿಚಾರವಾಗಿ ಮನೆಯಲ್ಲಿ ಕುಡಿದು ಬಂದು ಪದೇಪದೇ ಗಲಾಟೆ ನಡೆಯುತ್ತಿತ್ತು. ಈ ಬಗ್ಗೆ ಊರಿನ ಹಿರಿಯರಿಗೆ ಹಾಗೂ ಸಂಬಂಧಿಕರಿಗೆ ಕರೆಸಿ ತಿಳಿಹೇಳಲಾಗಿತ್ತು. ಗುರುವಾರ ಕಬ್ಬಿನ ಹೊಲಕ್ಕೆ ಹೋಗಿ ಬರೋಣ ಎಂದು ಬೈಕ್ ಮೇಲೆ ಪತ್ನಿಯನ್ನು ಕರೆದುಕೊಂಡು ಹೋಗಿದ್ದಾನೆ. ಹೊಲಕ್ಕೆ ತೆರಳುವ ಮಾರ್ಗ ಮಧ್ಯೆ ಬೈಕ್‌ ನಿಲ್ಲಿಸಿ ಮನಸೋ ಇಚ್ಛೆ ಮಚ್ಚಿನಿಂದ ಹಲ್ಲೆಗೈದು ಪರಾರಿಯಾಗಿದ್ದಾನೆ. ಹಲ್ಲೆ ಪರಿಣಾಮ ಸಿದ್ದಮ್ಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ದಂಪತಿಗೆ ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ. ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಭೂತಾಳಿ ಮೊದಲು ಮಕ್ಕಳನ್ನು ಹೊಲಕ್ಕೆ ಕಳುಹಿಸಿದ್ದ. ನಂತರ ಪತ್ನಿಯೊಂದಿಗೆ ಹೊರಟಿದ್ದ. ಹೊಲ ಇನ್ನೂ 100 ಮೀಟರ್ ದೂರದಲ್ಲಿರುವಾಗಲೇ ಬೈಕ್ ನಿಲ್ಲಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

 

ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ್, ಡಿವೈಎಸ್ಪಿ ಲೋಕೇಶ, ಸರ್ಕಲ್ ಇನ್ಸ್‌ಪೆಕ್ಟರ್ ಬಾಪುಗೌಡ ಪಾಟೀಲ, ಅಪರಾಧ ವಿಭಾಗದ ಪಿಎಸ್‌ಐ ಜ್ಯೋತಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಭೂತಾಳಿ ಪತ್ತೆಗಾಗಿ ಜಾಲ ಬೀಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತನಿಖೆ ಮುಂದುವರೆದಿದೆ.

Share This Article
Leave a Comment