ಮಂಗಳೂರು: ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಭೀಕರ ಘಟನೆಯೊಂದು ಸಂಭವಿಸಿದ್ದು, ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಇಡೀ ಕೃತ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಘಟನೆಯ ವಿವರ: ಶನಿವಾರ ತಡರಾತ್ರಿ ಸುಮಾರು 2 ಗಂಟೆಯ ವೇಳೆಗೆ ಉರ್ವಾ ಠಾಣಾ ವ್ಯಾಪ್ತಿಯ ಕೋಡಿಕಲ್ ನಾರಾಯಣಗುರು ಕೋ-ಆಪರೇಟಿವ್ ಸೊಸೈಟಿ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಅತೀ ವೇಗವಾಗಿ ಬಂದಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ, ದುಷ್ಕರ್ಮಿಗಳು ಅದನ್ನು ಲೆಕ್ಕಿಸದೆ ವೇಗವಾಗಿ ಮುಂದೆ ಸಾಗಿದ್ದಾರೆ. ಸ್ವಲ್ಪ ಸಮಯದ ನಂತರ ಅದೇ ಮಾರ್ಗದಲ್ಲಿ ಹಿಂತಿರುಗಿದ ದುಷ್ಕರ್ಮಿಗಳು, ತಮ್ಮ ಕೈಯಲ್ಲಿದ್ದ ಸಿಮೆಂಟ್ ಶೀಟ್‌ನ ತುಂಡಿನಿಂದ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯ ಮೇಲೆ ನೇರವಾಗಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ.
ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯನ್ನು ಹನುಮಂತ ಕಂಠಿ ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಲು ಬಂದಾಗ ಅವರು ತಕ್ಷಣವೇ ಕೆಳಕ್ಕೆ ಬಗ್ಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದಾಗ್ಯೂ, ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ಉರ್ವಾ ಠಾಣೆಯ ಪೊಲೀಸರು ತಿಳಿಸಿದ್ದಾರೆ.