ತಮಿಳುನಾಡು ಮುಖ್ಯಮಂತ್ರಿ ಹಾಗೂ ಮಾಜಿ ನಟ ವಿಜಯ್ ಅವರ ಜನ್ಮದಿನದ ಅಂಗವಾಗಿ ನಟಿ ತ್ರಿಷಾ ಕೃಷ್ಣನ್ ಹಂಚಿಕೊಂಡ ವಿಶೇಷ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಜೂನ್ 22ರಂದು ವಿಜಯ್ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು.
ಆದರೆ ಎಲ್ಲರ ಗಮನ ಸೆಳೆದಿದ್ದು ತ್ರಿಷಾ ಅವರ ಶುಭಾಶಯ ಸಂದೇಶ. ಮಂಗಳವಾರ ಅವರು ವಿಜಯ್ ಅವರೊಂದಿಗೆ ತೆಗೆಸಿಕೊಂಡಿರುವ ಆತ್ಮೀಯ ಫೋಟೋವನ್ನು ಹಂಚಿಕೊಂಡು, “ಜೀವನದಲ್ಲಿನ ಎಲ್ಲವನ್ನೂ ಸಾರ್ಥಕಗೊಳಿಸುವ ವ್ಯಕ್ತಿಗೆ, ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದು ಹೃದಯ ಹಾಗೂ ದೃಷ್ಟಿದೋಷ ನಿವಾರಕ ಎಮೋಜಿಗಳನ್ನು ಸೇರಿಸಿದ್ದರು.
ಹಂಚಿಕೊಂಡಿರುವ ಚಿತ್ರದಲ್ಲಿ ವಿಜಯ್ ಜನ್ಮದಿನದ ಕೇಕ್ ಕತ್ತರಿಸಲು ಸಜ್ಜಾಗಿದ್ದರೆ, ತ್ರಿಷಾ ಅವರನ್ನು ಪ್ರೀತಿಯಿಂದ ನೋಡುವ ಕ್ಷಣ ಸೆರೆಹಿಡಿಯಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಅಭಿಮಾನಿಗಳ ನಡುವೆ ಚರ್ಚೆಗೆ ಕಾರಣವಾಗಿದೆ.
ಕಳೆದ ಕೆಲವು ವರ್ಷಗಳಿಂದ ವಿಜಯ್ ಮತ್ತು ತ್ರಿಷಾ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಈ ಕುರಿತಂತೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದಾರೆ.
ಇತ್ತೀಚೆಗೆ ವಿಜಯ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲೂ ತ್ರಿಷಾ ಭಾಗವಹಿಸಿದ್ದದ್ದು ಸುದ್ದಿಯಾಗಿತ್ತು. ಅಲ್ಲದೆ ಈ ವರ್ಷದ ಆರಂಭದಲ್ಲಿ ಚೆನ್ನೈನಲ್ಲಿ ನಡೆದ ಮದುವೆ ಆರತಕ್ಷತೆಯಲ್ಲಿ ಇಬ್ಬರೂ ಒಂದೇ ರೀತಿಯ ಕ್ರೀಮ್ ಮತ್ತು ಚಿನ್ನದ ಬಣ್ಣದ ಉಡುಪುಗಳಲ್ಲಿ ಕಾಣಿಸಿಕೊಂಡಿದ್ದು, ವದಂತಿಗಳಿಗೆ ಮತ್ತಷ್ಟು ಇಂಧನ ನೀಡಿತ್ತು.
ಇದೀಗ ವಿಜಯ್ ಜನ್ಮದಿನದ ಅಂಗವಾಗಿ ತ್ರಿಷಾ ಹಂಚಿಕೊಂಡಿರುವ ಈ ಪೋಸ್ಟ್ ಮತ್ತೊಮ್ಮೆ ಇಬ್ಬರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದೆ. ಆದರೆ ಈ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಇಲ್ಲದ ಕಾರಣ, ಸದ್ಯಕ್ಕೆ ಎಲ್ಲವೂ ಊಹಾಪೋಹಗಳ ಮಟ್ಟದಲ್ಲೇ ಉಳಿದಿವೆ.