ಕಲಬುರಗಿ, ಜೂ. 9: ರಸಗೊಬ್ಬರಗಳ ಬೆಲೆ ನಿರಂತರ ಏರಿಕೆಯಾಗುತ್ತಿರುವುದು ಹಾಗೂ ವಿವಿಧ ಗೊಬ್ಬರಗಳ ಕೊರತೆ ಉಂಟಾಗಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕಲಬುರಗಿ ಜಿಲ್ಲಾ ಸಮಿತಿ ಆರೋಪಿಸಿದೆ.
ಸಂಘದ ಮುಖಂಡರು ಮಾತನಾಡಿ, ಕಾಂಪ್ಲೆಕ್ಸ್ ಹಾಗೂ ಪೊಟ್ಯಾಷ್ ರಸಗೊಬ್ಬರಗಳ ಬೆಲೆ ಕಳೆದ ವರ್ಷದ ಹೋಲಿಕೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕೆಲವು ಗೊಬ್ಬರಗಳ ಬೆಲೆ ₹1400ರಿಂದ ₹2200ರವರೆಗೆ ಹೆಚ್ಚಳ ಕಂಡಿದೆ. ಈಗಾಗಲೇ ಕೃಷಿ ವೆಚ್ಚ ಏರಿಕೆಯಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಇದು ಮತ್ತೊಂದು ಹೊಡೆತವಾಗಿದೆ ಎಂದು ತಿಳಿಸಿದರು.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ, ಸಬ್ಸಿಡಿ ಕಡಿತ ಹಾಗೂ ಬೆಲೆ ನಿಯಂತ್ರಣ ವ್ಯವಸ್ಥೆಯ ಸಡಿಲಿಕೆಯಿಂದ ರಸಗೊಬ್ಬರ ಕ್ಷೇತ್ರದಲ್ಲಿ ಬಿಕ್ಕಟ್ಟು ಉಂಟಾಗಿದೆ ಎಂದು ಆರೋಪಿಸಿದ ಸಂಘ, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳೇ ಈ ಪರಿಸ್ಥಿತಿಗೆ ಕಾರಣವೆಂದು ಟೀಕಿಸಿತು.
ಎಫ್‌ಐಡಿ (FID) ವ್ಯವಸ್ಥೆ ಮೂಲಕ ರಸಗೊಬ್ಬರ ವಿತರಣೆಯಿಂದ ಗ್ರಾಮೀಣ ಪ್ರದೇಶದ ಬಡ ಹಾಗೂ ಅಕ್ಷರಜ್ಞಾನ ಕಡಿಮೆ ಇರುವ ರೈತರಿಗೆ ಅನಗತ್ಯ ತೊಂದರೆ ಉಂಟಾಗುತ್ತಿದೆ. ಈ ವ್ಯವಸ್ಥೆಯನ್ನು ಸರಳಗೊಳಿಸಿ ರೈತ ಸ್ನೇಹಿ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸಂಘ ಆಗ್ರಹಿಸಿತು.
ರಾಜ್ಯದ ಹಲವೆಡೆ ಬಿತ್ತನೆ ಆರಂಭವಾಗಿರುವ ಸಂದರ್ಭದಲ್ಲಿ ರೈತರು ರಸಗೊಬ್ಬರಕ್ಕಾಗಿ ಅಂಗಡಿಯಿಂದ ಅಂಗಡಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಕಡೆಗಳಲ್ಲಿ ರೈತರು ಗೊಬ್ಬರ ಕಂಪನಿಗಳು ಹಾಗೂ ವಿತರಕರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮುಖಂಡರು ಹೇಳಿದರು.
ಕಳಪೆ ಗುಣಮಟ್ಟದ ರಸಗೊಬ್ಬರ ಮತ್ತು ಬೀಜಗಳನ್ನು ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ಆರೋಪಗಳ ಕುರಿತು ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಗಾ ವಹಿಸಿ, ಕಾಳಬಜಾರ್ ಹಾಗೂ ಅಕ್ರಮ ಸಂಗ್ರಹಣೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿತು.
ದೇಶದ ಆಹಾರ ಭದ್ರತೆ ಮತ್ತು ಕೃಷಿ ಸ್ವಾವಲಂಬನೆಗೆ ರೈತರು ಪ್ರಮುಖ ಆಧಾರಸ್ತಂಭರಾಗಿದ್ದು, ಕೃಷಿ ವೆಚ್ಚ ಹೆಚ್ಚಿಸಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ನಿರ್ಧಾರಗಳನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕಲಬುರಗಿ ಜಿಲ್ಲಾ ಸಮಿತಿ ಆಗ್ರಹಿಸಿತು.
ಈ ಸಂದರ್ಭದಲ್ಲಿ ಶರಣಬಸಪ್ಪ ಮಮಶೆಟ್ಟಿ, ರೇವಣಸಿದ್ದಪ್ಪ ಪಾಟೀಲ, ಭೀಮಶಾ ಬಡದಾಳ, ದೇವು ಬಿರಾದಾರ, ಶರಣಪ್ಪ ವಚ್ಚಾ, ಸಿದ್ದು ಎಸ್.ಎಲ್. ಸೇರಿದಂತೆ ಹಲವಾರು ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.