ವಚನ ಸಾಹಿತ್ಯದಲ್ಲಿ ಪರಿಸರ ಕಾಳಜಿ: ಪ್ರಭುದೇವ ಸ್ವಾಮೀಜಿ

 

ಬೀದರ್, ಜೂ.೨೪- ವಚನ ಸಾಹಿತ್ಯದಲ್ಲಿ ಪರಿಸರ ಕಾಳಜಿ ಕಾಣಬಹುದು ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಲಿಂಗಾಯತ ಮಹಾ ಮಠದ ವತಿಯಿಂದ ನಗರದ ಬಸವಗಿರಿಯಲ್ಲಿ ಮಂಗಳವಾರ ಆಯೋಜಿಸಿದ್ದ ೨೭೬ನೇ ಮಾಸಿಕ ಶರಣ ಸಂಗಮ, ದಸರಯ್ಯ ಶರಣರ ವಚನ ಚಿಂತನೆ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬಸವಾದಿ ಶರಣರು ಹನ್ನೆರಡನೆಯ ಶತಮಾನದಲ್ಲೇ ಸಸ್ಯಗಳಲ್ಲಿ ಜೀವ ಇರುವುದನ್ನು ಕಂಡುಕೊAಡಿದ್ದರು ಎಂದು ತಿಳಿಸಿದರು.

ಅಕ್ಕ ಮಹಾದೇವಿ ಗಿಡ, ಮರ, ಬಳ್ಳಿಗಳನ್ನು ಮಾತನಾಡಿಸುತ್ತಿದ್ದರು. ದಯಾಮಯಿ ಶರಣ ದಸರಯ್ಯ ಅವರು ಹೂ ಕೀಳಿದರೂ ವೃಕ್ಷಕ್ಕೆ ನೋವಾಗುತ್ತದೆಯೆಂದು ಉದುರಿ ಬಿದ್ದ ಹೂವನ್ನೇ ಪೂಜೆಗೆ ಬಳಸುತ್ತಿದ್ದರು. ಶರಣರ ಪರಿಸರ ಪ್ರೇಮಕ್ಕೆ ಸಾಟಿ ಇಲ್ಲ. ಎಲ್ಲದರಲ್ಲಿಯೂ ಪರಮಾತ್ಮನನ್ನು ಕಾಣಬೇಕು. ಗಿಡ-ಮರಗಳು ನಮ್ಮ ಭಾವನೆಗೆ ಸ್ಪಂದಿಸುವ ಕಾರಣ ಅವುಗಳ ಒಡನಾಟದಲ್ಲಿ ಬದುಕಬೇಕು. ಪ್ರತಿ ವರ್ಷ ಸಸಿ ನೆಟ್ಟು ಬೆಳೆಸಿದರೆ ಸಕಾಲಕ್ಕೆ ಮಳೆ-ಬೆಳೆ ಬರುತ್ತದೆ. ಕನಿಷ್ಠ ತಮ್ಮ ತಮ್ಮ ಜನ್ಮದಿನವನ್ನಾದರೂ ಸಸಿ ನೆಟ್ಟು ಆಚರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಉದ್ಘಾಟನೆ ನೆರವೇರಿಸಿದ ಬಸವಕಲ್ಯಾಣದ ನಿವೃತ್ತ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಪಟವಾದಿ ಅವರು ಮಾತನಾಡಿ, ಕಾಯಕ ನಿಷ್ಠೆಗೆ ಹೆಸರಾಗಿದ್ದ ದಸರಯ್ಯ-ವೀರಮ್ಮ ದಂಪತಿ ರಾಮಕೊಂಡಾದಿAದ ಬಸವಕಲ್ಯಾಣಕ್ಕೆ ಬಂದಿದ್ದರು. ದಸರಯ್ಯನವರ ವಚನಾಂಕಿತ ದಸರೇಶ್ವರಲಿಂಗ. ಅವರ ಹತ್ತು ವಚನಗಳು ಮಾತ್ರ ಲಭಿಸಿದ್ದು, ಅವುಗಳಲ್ಲಿ ಪರಿಸರ ಪ್ರೇಮ ತುಂಬಿ ತುಳುಕುತ್ತಿದೆ. ದಸರಯ್ಯ ಜಗತ್ತಿಗೆ ದಯೆ, ಅಹಿಂಸೆ ಹಾಗೂ ಸತ್ಯದ ಮಾರ್ಗ ತೋರಿದ್ದರು ಎಂದು ತಿಳಿಸಿದರು.

ಮಾನವನ ಸ್ವಾರ್ಥದಿಂದ ಪರಿಸರ ಅಸಮತೋಲನ ಉಂಟಾಗಿದೆ. ಸಕಾಲಕ್ಕೆ ಮಳೆ ಬರುತ್ತಿಲ್ಲ. ಜೀವ ಸಂಕುಲ ಅಳಿವಿನ ಅಂಚಿಗೆ ತಲುಪುತ್ತಿದೆ. ನೀರಿಗಾಗಿ ನೂರಾರು ಅಡಿ ಕೊಳವೆಬಾವಿ ಕೊರೆಸುವುದಕ್ಕಿಂತ ಮೂರು ಅಡಿ ತಗ್ಗು ತೋಡಿ ಗಿಡ ನೆಟ್ಟರೆ ನೀರು ಸಿಗುತ್ತದೆ. ಸಹೋದರಿಯರ ರಕ್ಷಣೆಗಾಗಿ ರಕ್ಷಾ ಬಂಧನ ಮಾಡುವಂತೆ ಪ್ರಕೃತಿ ಮಾತೆಯ ರಕ್ಷಣೆಗಾಗಿ ವೃಕ್ಷ ಬಂಧನ ಮಾಡಬೇಕು. ಜನರಲ್ಲಿ ಶರಣರ ತತ್ವಗಳ ಪ್ರಜ್ಞೆ ಮೂಡಿಸುತ್ತಿರುವ ಪ್ರಭುದೇವ ಸ್ವಾಮೀಜಿ ಅವರ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ಯಾಮಲಾ ಎಲಿ ಅವರು ಮಾತನಾಡಿ, ಅಕ್ಕ ಅನ್ನಪೂರ್ಣ ತಾಯಿ ಅವರ ಒಡನಾಟದ ದಿನಗಳನ್ನು, ಅವರ ಭಕ್ತಿಯ ಶಕ್ತಿಯನ್ನು ನೆನೆದು ಭಾವುಕರಾದರು. ಅಕ್ಕನವರ ಕುರಿತ ಸ್ವರಚಿತ ಪದ್ಯ ಹಾಡಿದರು. ನಿವೃತ್ತ ಶಿಕ್ಷಕರಾದ ಅಶೋಕ ಮಠಪತಿ ಹಾಗೂ ಸಂಗಮ್ಮ ಪಾರಾ ಅವರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಾಹಿತಿ ರಮೇಶ ಮಠಪತಿ ಅವರು ಉಪಸ್ಥಿತರಿದ್ದರು. ನಿಕಿತಾ, ನಿತೀಶ್, ರಕ್ಷಿತಾ ಗುರುಪೂಜೆ, ಸಿದ್ದಮ್ಮ ಎಸ್.ಎಂ. ಹಾಗೂ ಮಹಾದೇವಿ ಮಠಪತಿ ಪ್ರಾರ್ಥನೆ ನಡೆಸಿಕೊಟ್ಟರು. ಮಹಾಂತೇಶ ಮತ್ತು ಶಂಕರ ಶೀಲವಂತ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಮಹಾನಂದಾ ಶ್ರೀಕಾಂತ ಬೀಕ್ಲೆ ಭಕ್ತಿ ದಾಸೋಹಗೈದರು. ಮಾಣಿಕಪ್ಪ ಖಂಡ್ರೆ ಸ್ವಾಗತಿಸಿದರು.

Share This Article
Leave a Comment