ಕಲಬುರ್ಗಿ, ಜೂ.೧೭- ಅಂಗನವಾಡಿ ನೌಕರರ ಅಕ್ರಮ ನೇಮಕಾತಿಯಲ್ಲಿನ ಪ್ರಮುಖ ಆರೋಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ್ ಬಾಳವಾಲೆ ಅವರನ್ನು ಬೀದರ್ ಜಿಲ್ಲೆಯ ಭಾಲ್ಕಿಗೆ ವರ್ಗಾವಣೆ ಮಾಡುವ ಮೂಲಕ ಅವರನ್ನು ರಕ್ಷಿಸಲಾಗುತ್ತಿದೆ. ಕೂಡಲೇ ವರ್ಗಾವಣೆ ರದ್ದುಪಡಿಸಿ, ಆರೋಪಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲಿಗೆ ಕಳಿಸಬೇಕು ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಹಾಗೂ ವಿಭಾಗೀಯ ಉಸ್ತುವಾರಿ ಅಧ್ಯಕ್ಷ ಮಲ್ಲಿಕಾರ್ಜುನ್ ಎಸ್. ಸಾರವಾಡ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಭಾಲ್ಕಿಯಲ್ಲಿ ಸಿಡಿಪಿಓ ಆಗಿದ್ದ ಶ್ರೀನಿವಾಸ್ ಬಾಳವಾಲೆ ಅವರಿಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕಲಬುರ್ಗಿಗೆ ವರ್ಗಾವಣೆ ಮಾಡಲಾಗಿತ್ತು. ಈಗ ಸಾರ್ವಜನಿಕ ದೂರಿನ ಮೇಲೆ ಮತ್ತೆ ಭಾಲ್ಕಿಗೆ ವರ್ಗಾವಣೆ ಮಾಡಲಾಗಿದೆ. ಇದನ್ನು ನೋಡಿದರೆ ವರ್ಗಾವಣೆಯು ಶಿಕ್ಷೆಯಲ್ಲ, ಭ್ರಷ್ಟರನ್ನು ರಕ್ಷಿಸುವ ತಂತ್ರವಾಗಿದೆ. ಆದ್ದರಿಂದ ಕೂಡಲೇ ವರ್ಗಾವಣೆ ತಡೆದು ಕಾನೂನಿನ ಅಡಿ ಬಾಳವಾಲೆ ಅವರಿಗೆ ಶಿಕ್ಷೆ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಳೆದ ೨೦೨೫-೨೬ನೇ ಸಾಲಿನಲ್ಲಿ ನಗರದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿಯಲ್ಲಿ ನಿಯಮ ಬಾಹಿರವಾಗಿ ಅಕ್ರಮ ಅಂಕಪಟ್ಟಿ ಸೃಷ್ಟಿಸಿ ಹುದ್ದೆ ನೀಡಿರುವ ಸಿಡಿಪಿಓ ನಿವಾಸ ಬಾಳವಾಲೆ ಅವರಿಗೆ ಸೇವೆಯಿಂದ ಅಮಾನತ್ತು ಮಾಡದೇ, ಕ್ರಿಮಿನಲ್ ಮೊಕದ್ದಮೆ ಹಾಕದೇ ಕೇವಲ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವ ಮೂಲಕ ಅವರಿಗೆ ಸಹಕಾರ ನೀಡುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಈಗಾಗಲೇ ಸಿಡಿಪಿಓ ಬಾಳವಾಲೆ ವಿರುದ್ಧ ಕ್ರಮಿನಲ್ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈ ಕುರಿತು ಲೋಕಾಯುಕ್ತರಿಗೂ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ಇಂತಹ ಗಂಭೀರ ಪ್ರಕರಣವನ್ನು ಮುಚ್ಚಿಹಾಕಲು ಮೇಲಾಧಿಕಾರಿಗಳು ವರ್ಗಾವಣೆಯ ನಾಟಕ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅತ್ಯಂತ ಪಾರದರ್ಶಕವಾಗಿ ನಡೆಯಬೇಕಿದ್ದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ನೇಮಕಾತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿ, ಅರ್ಹ ಅಭ್ಯರ್ಥಿಗಳಿಗೆ ದ್ರೋಹ ಬಗೆದಿರುವುದು ಖಂಡನಿಯ ವಿಷಯ. ಅರ್ಹತೆ ಇಲ್ಲದ ಅಭ್ಯರ್ಥಿಗಳಿಂದ ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿ, ಅವರಿಗೆ ಅಕ್ರಮವಾಗಿ ಹುದ್ದೆಗಳನ್ನು ನೀಡಿರುವ ಶ್ರೀನಿವಾಸ್ ಬಾಳವಾಲೆ ಭ್ರಷ್ಟಾಚಾರದ ವಿರುದ್ಧ, ಅಂಗನವಾಡಿ ಹುದ್ದೆ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ಸೃಷ್ಟಿಸಿದ್ದ ನಕಲಿ ಅಂಕಪಟ್ಟಿಗಳನ್ನು ನೈಜವೆಂದು ಬಿಂಬಿಸಿ ನೇಮಕಾತಿ ಆದೇಶ ನೀಡಲಾಗಿದೆ. ಈ ಅಂಕಪಟ್ಟಿಗಳ ನೈಜತೆಯ ಪರಿಶೀಲನೆಗಾಗಿ (ಎಸ್‌ಎಸ್‌ಎಲ್‌ಜಿ) ಕರ್ನಾಟಕ ಸ್ಕೂಲ್ ಎಕ್ಸಾಮಿನೇಷನ್ ಆಂಡ್ ಅಸೆಸ್‌ಮೆಂಟ್ ಬೋರ್ಡ್ಗೆ ಕಳುಹಿಸಿದಾಗ ಅಲ್ಲಿಂದ ಇವುಗಳು ನಾಟ್ ಅಥೆಂಟಿಕ್ (ಹೊಂದಾಣಿಕೆಯಾಗುತ್ತಿಲ್ಲ/ ನಕಲಿ) ಎಂದು ಸ್ಪಷ್ಟವಾದ ವರದಿ ಬಂದಿದೆ. ಅಧಿಕೃತ ವರದಿ ಬಂದಿದ್ದರೂ, ಸಂಬAಧಪಟ್ಟ ಅಧಿಕಾರಿಗಳು ಅವರ ಮೇಲೆ ಕ್ರಮ ಕೈಗೊಳ್ಳದೇ ಭ್ರಷ್ಟ ಅಧಿಕಾರಿಯನ್ನು ರಕ್ಷಿಸಿ ಹುದ್ದೆಯಲ್ಲಿ ಮುಂದುವರೆಸುತ್ತಿರುವುದು ಅವರೂ ಸಹ ನೇರ ಶಾಮೀಲು ಆಗಿರುವುದನ್ನು ದೃಢಪಡಿಸುತ್ತದೆ ಎಂದು ಅವರು ದಊರಿದರು.
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ ಶ್ರೀನಿವಾಸ್ ಬಾಳವಾಲೆ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು. ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ನಕಲಿ ದಾಖಲೆ ಸೃಷ್ಟಿಸಿದ ಅಭ್ಯರ್ಥಿಗಳು ಹಾಗೂ ಇದಕ್ಕೆ ಸಹಕರಿಸಿದ ಅಧಿಕಾರಿಯ ಮೇಲೆ ಐಪಿಸಿ/ ಬಿಎನ್ ಕಾಯ್ದೆಯಡಿ ತಕ್ಷಣವೇ ಕ್ರಿಮಿನಲ್ ಮೊಕದ್ದವೆ ದಾಖಲಿಸಿ ಜೈಲಿಗಟ್ಟಬೇಕು. ಅರ್ಹ ಮತ್ತು ಬಡ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು. ಇದು ಕೇವಲ ಒಂದು ಹುದ್ದೆಯ ಅಕ್ರಮವಲ್ಲ, ಗ್ರಾಮೀಣ ಭಾಗದ ಶ್ರಮಿಕ ಮಹಿಳೆಯರ ಹಕ್ಕನ್ನು ಕಸಿದುಕೊಳ್ಳುವ ವ್ಯವಸ್ಥಿತ ದಂಧೆಯಾಗಿದೆ. ಈ ಭ್ರಷ್ಟ ಜಾಲದ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಕೇವಲ ವರ್ಗಾವಣೆ ಆದೇಶಕ್ಕೆ ಸಿಮಿತವಾದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಕಾನೂನಾತ್ಮಕ ಹೋರಾಟ ಹಾಗೂ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು. ಪಿಂಟು ಕ್ಷತ್ರಿ, ಶ್ರೀಕಾಂತರೆಡ್ಡಿ, ರಾಜು ಕಂಬಾರ್, ಸಂಭಾಜಿ ಪಿಸೆ, ರ‍್ಯ ಸಿಂಗೆ ಮುಂತಾದವರು ಉಪಸ್ಥಿತರಿದ್ದರು.