ಕಲಬುರಗಿ,ಜೂ.16- ಕನ್ನಡ ನಾಡಿನ ಸಂಸ್ಕೃತಿ ಮತ್ತು ಕಲೆಯನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರವು ಅನೇಕ ರೀತಿಯ ಸಹಕಾರವನ್ನು ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ನೀಡಿ ಪ್ರೋತ್ಸಾಹಿಸುತ್ತಿದೆ .ಹಾಗೂ ಶಿವಶರಣರು ಬರೆದಂತಹ ಅನೇಕ ವಚನ ತತ್ವಪದಗಳಿಂದ ನಮ್ಮ ಸಮಾಜದಲ್ಲಿ ಮನಸ್ಸಿಗೆ ಶಾಂತಿ ಸಮಾಧಾನ ತಂದಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅಭಿಪ್ರಾಯಪಟ್ಟರು.
ಅವರು ಸೋಮವಾರ ಕಲಬುರಗಿಯಲ್ಲಿ ಗಡಿನಾಡ ಸಂಗೀತ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ *ಲಲಿತ ಕಲೆಗಳ ಸಂಗಮ ಸಾಂಸ್ಕೃತಿಕ* ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆ ಮಹಾಮಂಡಳಿ ನಿರ್ದೇಶಕ ಧರ್ಮರಾಜ ಸಾಹು ಭೂಸನೂರ ಮಾತನಾಡಿ,ಲಲಿತ ಕಲೆಗಳಲ್ಲಿ ಬರುವಂತಹ ಶಿಲ್ಪ,,ಚಿತ್ರಕಲೆ,ಸಾಹಿತ್ಯ , ಸಂಗೀತ ಕಲೆಗಳು ನಮ್ಮ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿದಿವೆ. ಮಾನವನ ಜೀವನದಲ್ಲಿ ಹಾಗೂ ಸಕಲ ಜೀವಿಗಳಲ್ಲಿ ಕಲೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಮಂಗಲಗಿಯ ಶ್ರೀ ಶಾಂತೇಶ್ವರ ಹಿರೇಮಠದ ಡಾ. ಶಾಂತ ಸೋಮನಾಥ ಶಿವಾಚಾರ್ಯ ದಿವ್ಯ ಸಾನಿಧ್ಯ ವಹಿಸಿದ್ದರು. ಡಾ. ನೀಲಾಂಬಿಕಾ ಪೋಲಿಸ್ ಪಾಟೀಲ, ಬಸವರಾಜ ಮುನ್ನೊಳ್ಳಿ, ಶಂಭುಲಿಂಗಯ್ಯ ಮಠಪತಿ ತಾವರಗೇರಾ, ಶಿವಯ್ಯ ಸ್ವಾಮಿ ಆಲೂರ ಬಿ. ಮುಖ್ಯ ಅತಿಥಿಗಳಾಗಿದ್ದರು.
ನಂತರ ಹೆಸರಾಂತ ಆಕಾಶವಾಣಿ ದೂರದರ್ಶನ ಕಲಾವಿದರಾದ ಬಸವರಾಜ ಭಂಟನೂರ, ಮಲ್ಲಿಕಾರ್ಜುನ ಶಾಸ್ತ್ರೀ ಐನಾಪೂರ, ಜಗದೀಶ ನಗನೂರ, ಕವಿತಾ ಮಠಪತಿ ಮೊದಲಾದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಇನ್ನೋರ್ವ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಹಾಗೂ ನಿವೃತ್ತ ವಾರ್ತಾಧಿಕಾರಿ ಜಿ.ಚಂದ್ರಕಾಂತ ಸೋಹನಿ ರಾಗದಲ್ಲಿ ಪ್ರಸ್ತುತ ಪಡಿಸಿದ ತ್ರಿಭಾಷಾ ವಚನ ಗಾಯನ ವಿಶೇಷವಾಗಿತ್ತು. ಗುರುಶಾಂತಯ್ಯ ಸ್ಥಾವರಮಠ ಸ್ವಾಗತಿಸಿದರು. ವಿಶ್ವನಾಥ ರಾಜನಾಳ ನಿರೂಪಿಸಿದರು. ಸಂಸ್ಥೆಯ ಅಧ್ಯಕ್ಷ ವೀರಭದ್ರಯ್ಯ ಸ್ಥಾವರಮಠ ವಂದಿಸಿದರು.