ಕಲಬುರ್ಗಿ, ಮೇ.೧೫- ವೈದ್ಯಕೀಯ ಶಿಕ್ಷಣ ಹರಾಜು ನಿಲ್ಲಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಕೌನ್ಸಿಲ್ ಉಪಾಧ್ಯಕ್ಷ ಗೋವಿಂದ್ ಯಾಳವಾರ್ ಅವರು ಮಾತನಾಡಿ, ವೈದ್ಯಕೀಯ ಸೀಟಿಗಾಗಿ ಹಲವಾರು ವಿದ್ಯಾರ್ಥಿಗಳು ಲಕ್ಷಾಂತರ ದುಡ್ಡು ಸುರಿದು ವರ್ಷಗಟ್ಟಲೇ ಎಡೆಬಿಡದೆ ಹಗಲು ರಾತ್ರಿ ಕನಸು ಕಟ್ಟಿಕೊಂಡು ನೀಟ್ ಪರೀಕ್ಷೆಯ ತಯಾರಿ ನಡೆಸುತ್ತಾರೆ. ನೀಟ್ ಯುಜಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಸೋರಿಕೆ ಆಗಿದೆ. ಇದು ಹಲವಾರು ಬಡ ವಿದ್ಯಾರ್ಥಿಗಳ ಆಸೆ ಕನಸುಗಳಿಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಎನ್‌ಟಿಎ ಸಂಸ್ಥೆಯು ದೊಡ್ಡ ದೊಡ್ಡ ಕೋಚಿಂಗ್ ಮಾಫಿಯಾದ ಕೈ ಗೊಂಬೆಯಾಗಿ ದೊಡ್ಡ ದಂಧೆನಡೆಸುತ್ತಿದೆ. ದುಡ್ಡಿಗಾಗಿ ಲಕ್ಷಾಂತರ ವಿದ್ಯಾರ್ಥಿಗಳ ಆಸೆ ಕನಸುಗಳಿಗೆ ಮಣ್ಣೆರೆಚಿದೆ. ಎನ್ ಟಿ ಎ ಸಂಸ್ಥೆಯ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕೌನ್ಸಿಲ್ ಉಪಾಧ್ಯಕ್ಷೆ ಪ್ರೀತಿ ದೊಡ್ಡಮನಿ ಅವರು ಮಾತನಾಡಿ, ವೈದ್ಯಕೀಯ ಸೀಟ್ ಗೋಸ್ಕರ ಲಕ್ಷಾಂತರ ಬಡ ವಿದ್ಯಾರ್ಥಿಗಳು ಹಗಲು ರಾತ್ರಿ ಕಷ್ಟ ಪಟ್ಟು ತಯಾರಿ ನಡೆಸುತ್ತಾರೆ. ಇಂತಹ ವೈದ್ಯಕೀಯ ಶಿಕ್ಷಣದ ಕನಸು ಹೊತ್ತವರ ಆಶೋತ್ತರಗಳನ್ನು ಎನ್ ಟಿಎ ಸಂಸ್ಥೆಯು ಅತಿ ಹೆಚ್ಚು ಹಣ ನೀಡುವವರಿಗೆ ಹರಾಜು ಹಾಕಿದೆ. ಕೇವಲ ಕೆಲವರ ಲಾಭಕ್ಕಾಗಿ ಸಾರ್ವಜನಿಕ ಶಿಕ್ಷಣದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಖಂಡಿಸಿದರು.
ನಮ್ಮ ವಿದ್ಯಾರ್ಥಿಗಳ ಭವಿಷ್ಯದ ಅಡಿಪಾಯವನ್ನೇ ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯಕ್ಕೆ ಬಲಿ ನೀಡಲಾಗುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಮಾರುಕಟ್ಟೆಯನ್ನಾಗಿ ಮಾಡಿಕೊಂಡಿರುವವರಿAದ ಇಂಥ ಸಮಸ್ಯೆಗಳು ಪದೇ ಪದೇ ಹಲವು ಕೇಂದ್ರೀಕೃತ ಪರೀಕ್ಷೆಗಳಲ್ಲಿ ಮರುಕಳಿಸುತ್ತವೆ. ಇದು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಹತಾಶೆ ಮೂಡಿಸಿದೆ. ಸರ್ಕಾರ ಕೂಡಲೇ ಎನ್‌ಟಿಎ ಸಂಸ್ಥೆಯನ್ನು ವಜಾಗೊಳಿಸಿ ಕಠಿಣ ಶಿಕ್ಷೆ ನೀಡಬೇಕು. ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆಗೆ ವಿದ್ಯಾರ್ಥಿಗಳು ಸಜ್ಜಾಗಬೇಕು ಎಂದು ಅವರು ಕರೆ ನೀಡಿದರು. ಪ್ರತಿಭಟನೆಯಲ್ಲಿ ವೆಂಕಟೇಶ್ ದೇವದುರ್ಗ, ಜಿಲ್ಲಾ ಖಜಾಂಚಿ ಸ್ಪೂರ್ತಿ ಗುರಜಾಲಕರ್, ಜಿಲ್ಲಾ ಸಮಿತಿ ಸದಸ್ಯ ಯುವರಾಜ್ ರಾಠೋಡ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.