ನಾಗರಿಕ ಪೌರತ್ವ ತರಬೇತಿ ಶಿಬಿರ ಪ್ರಜಾಪ್ರಭುತ್ವದ ಬಲವರ್ಧನೆಗೆ ಉತ್ತಮ ನಾಗರಿಕರ ಪಾತ್ರ ಮುಖ್ಯ: ದೇಶಮುಖ್

 

 

ಕಲಬುರ್ಗಿ, ಜೂ.೩- ನಮ್ಮ ದೇಶದ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗೆ ಉತ್ತಮ ನಾಗರಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಾಗರಿಕ ಪೌರತ್ವ ಎಂದರೆ ಕೇವಲ ಹಕ್ಕುಗಳನ್ನು ಅನುಭವಿಸುವುದಲ್ಲ, ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೂ ಆಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ್ ದೇಶಮುಖ್ ಅವರು ಹೇಳಿದರು.

ನಗರದ ಗೋದುತಾಯಿ ಮಹಿಳಾ ಶಿಕ್ಷಣ(ಬಿ.ಎಡ್) ಮಹಾವಿದ್ಯಾಲಯದಲ್ಲಿ ಬುಧವಾರ ನಾಗರಿಕ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಾಜದ ಭವಿಷ್ಯದ ನಿರ್ಮಾತೃಗಳು. ವಿಶೇಷವಾಗಿ ಬಿ.ಎಡ್. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಆದ್ದರಿಂದ ದೇಶಭಕ್ತಿ, ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯಗಳು ಮತ್ತು ಸಂವಿಧಾನದ ಆಶಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಮಹಿಳೆಯರು ಶಿಕ್ಷಕರಾಗುವುದರ ಮೂಲಕ ಮನೆ ಮತ್ತು ಸಮಾಜದಲ್ಲಿ ಶಿಕ್ಷಣವನ್ನು ಅಭಿವೃದ್ಧಿಗೊಳಿಸಲು ಸಾಧ್ಯವಿದೆ ಎಂದರು.

ಅತಿಥಿಗಳಾದ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರೇಣುಕಾ ಎಸ್. ಗುಬ್ಬೇವಾಡ ಅವರುಮಾತನಾಡಿ, ಭಾರತದ ಸಂವಿಧಾನವು ನಮಗೆ ಸಮಾನತೆ, ಸ್ವಾತಂತ್ರ‍್ಯ, ನ್ಯಾಯ ಮತ್ತು ಸಹೋದರತ್ವದ ಮೌಲ್ಯಗಳನ್ನು ಕಲಿಸುತ್ತದೆ. ಪ್ರತಿಯೊಬ್ಬ ನಾಗರಿಕನು ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಬಳಸಬೇಕು, ಕಾನೂನುಗಳನ್ನು ಗೌರವಿಸಬೇಕು ಹಾಗೂ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡಬೇಕು. ಈ ತರಬೇತಿ ಶಿಬಿರವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಶಿಸ್ತು, ಸೇವಾ ಮನೋಭಾವ ಹಾಗೂ ರಾಷ್ಟ್ರೀಯ ಏಕತೆಯ ಭಾವನೆಯನ್ನು ಬೆಳೆಸುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕಿ ಡಾ. ನೀಲಾಂಬಿಕಾ ಶೇರಿಕಾರ್ ಅವರು ಮಾತನಾಡಿ, ಇಂತಹ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಸಮಾಜಮುಖಿ ಚಿಂತನೆ ಬೆಳೆಸಲು ಬಹಳ ಸಹಕಾರಿಯಾಗುತ್ತವೆ. ಈ ಶಿಬಿರದಲ್ಲಿ ದೊರೆಯುವ ಜ್ಞಾನ ಮತ್ತು ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಬಿರದಿಂದ ಎಲ್ಲರಿಗೂ ಉಪಯುಕ್ತವಾಗಲಿ ಹಾಗೂ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿ ಎಂದರು.

ಪ್ರಾಚಾರ್ಯೆ ಡಾ.ಕಲ್ಪನಾ ಭೀಮಳ್ಳಿ ಪ್ರಾಸ್ತಾವಿಕ ಮಾತನಾಡಿದರೆ, ಸುಪ್ರಿಯಾ ನಾಗಶೆಟ್ಟಿ ಸ್ವಾಗತಿಸಿದರು. ಕು. ಭಾಗಮ್ಮ ಮತ್ತು ಕು. ಐಶ್ವರ್ಯ ನಿರೂಪಿಸಿದರು. ಸುಧಾ ಎಸ್.ಬಿ. ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

Share This Article
Leave a Comment