ಅಳ್ಳಗಿ.ಬಿ ಕಾಲುವೆ ಹಾಳು: ರೈತರಿಗೆ ಜಮೀನಿಗೆ ತೆರಳಲು ರಸ್ತೆ ಇಲ್ಲ !

 

ಅಫಜಲಪುರ: ತಾಲೂಕಿನ ಅಳ್ಳಗಿ.ಬಿ ಗ್ರಾಮದ ಸಮೀಪದ ಕಾಲುವೆ ಹಾಳಾಗಿರುವ ಪರಿಣಾಮ ರೈತರು ತಮ್ಮ ಜಮೀನಿಗೆ ತೆರಳಲು ರಸ್ತೆ ಸೌಲಭ್ಯವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗೌರ ಕೆ. ಗ್ರಾಮದ ರೈತ ಗುರುಪಾದ ಪೂಜಾರಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಜಮೀನಿಗೆ ತೆರಳಲು ಸಮರ್ಪಕ ರಸ್ತೆ ಇಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಯಾದ ಭೀಮಾ ಏತ ನೀರಾವರಿ ಇಲಾಖೆಯ ಅಧಿಕಾರಿ ಸಂತೋಷ ಸಜ್ಜನ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳೆಗಾಲ ಆರಂಭವಾದರೆ ಜಮೀನಿಗೆ ಹೇಗೆ ಹೋಗಬೇಕು ಎಂಬ ಆತಂಕ ರೈತರನ್ನು ದಿನನಿತ್ಯ ಕಾಡುತ್ತಿದೆ. ಜಮೀನಿನಲ್ಲಿ ಬೆಳೆದ ದವಸ-ಧಾನ್ಯಗಳನ್ನು ಸಾಗಿಸಲು ಹಾಗೂ ಕಬ್ಬು ಕಟಾವು ಮಾಡಿದ ಬಳಿಕ ವಾಹನಗಳ ಮೂಲಕ ಸಾಗಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕೃಷಿ ಚಟುವಟಿಕೆಗಳನ್ನು ನಡೆಸುವುದಕ್ಕೂ ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಮೀನಿನಲ್ಲೇ ಮನೆ ಇದ್ದು ಕುಟುಂಬ ವಾಸಿಸುತ್ತಿದೆ. ಮನೆಯಲ್ಲಿರುವ ವೃದ್ಧರಿಗೆ ಅನಾರೋಗ್ಯ ಉಂಟಾದರೆ ರಸ್ತೆ ಇಲ್ಲದೆ ಆಸ್ಪತ್ರೆಗೆ ಕರೆದೊಯ್ಯುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಮತ್ತೊಂದೆಡೆ ರಸ್ತೆ ಸಮಸ್ಯೆಯಿಂದ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿ ಹಾಗೂ ಕಾಲುವೆ ಸಮಸ್ಯೆ ಪರಿಹರಿಸಬೇಕು ಎಂದು ರೈತರು ಆಗ್ರಹಿಸಿದರು.

ಈ ಕುರಿತು ಭೀಮಾ ಏತ ನೀರಾವರಿ ಇಲಾಖೆಯ ಅಧಿಕಾರಿ ಸಂತೋಷ ಸಜ್ಜನ ಪ್ರತಿಕ್ರಿಯಿಸಿ, ರೈತರು ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಜಮೀನಿಗೆ ತೆರಳಲು ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

Share This Article
Leave a Comment