ಮತದಾನದ ಹಕ್ಕು ಕಸಿದುಕೊಳ್ಳುವುದು ಪ್ರಜಾಪ್ರಭುತ್ವದ ಕಗ್ಗೊಲೆ: ಡಾ. ಜ್ಞಾನಪ್ರಕಾಶ ಸ್ವಾಮೀಜಿ

 

ಬೀದರ್, ಜು.೧೪- ಭಾರತೀಯ ಸಂವಿಧಾನವು ದೇಶದ ಎಲ್ಲ ನಾಗರಿಕರಿಗೆ ಸಮಾನ ಹಕ್ಕು, ಸಮಾನ ರಕ್ಷಣೆ ಹಾಗೂ ಸಮಾನ ಪ್ರಗತಿಯ ಅವಕಾಶಗಳನ್ನು ನೀಡಿದ್ದು, ದೇಶದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಪ್ರಜೆಗಳಿಗೆ ನೀಡಿದೆ. ಆದರೆ ಕೇಂದ್ರ ಸರ್ಕಾರದ ಸೂಚನೆಯಂತೆ ಚುನಾವಣಾ ಆಯೋಗ ಎಸ್‌ಐಆರ್ ಹೆಸರಿನಲ್ಲಿ ಬಡ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಉರಿಲಿಂಗ ಪೆದ್ದಿಮಠ, ಮೈಸೂರಿನ ಡಾ. ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಕ್ಕಚೌಡಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಶಾಂತಿ ತಥಾಗತ ಗೌತಮ ಬುದ್ಧ ಮಹಾದ್ವಾರ ಹಾಗೂ ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ಮತದಾನದ ಹಕ್ಕು ರಕ್ಷಿಸಿಕೊಳ್ಳಲು ಜನರು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಪ್ರಧಾನ ಸಂಚಾಲಕ ಮಾವಳಿ ಶಂಕರ್ ಅವರು ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಜಾರಿಯಾದರೆ ಔರಾದ್ (ಬಿ) ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಸೇರಿದಂತೆ ಅನೇಕ ಜನರ ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಆರೋಪಿಸಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬಂಡೆಪ್ಪ ಖಾಶೆಂಪೂರೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಹೊಣ್ಣೂರು ಶ್ರೀನಿವಾಸ್, ಅನಿಲಕುಮಾರ್ ಬೆಲ್ದಾರ್, ಬಾಬುರಾವ್ ಪಾಶ್ವಾನ್, ಶ್ರೀಪತರಾವ್ ದೀನೆ, ರಮೇಶ್ ಡಾಕುಳಗಿ ಹಾಗೂ ಡಾ. ಸಿದ್ದರಾಮೇಶ್ವರ ಬೆಲ್ದಾಳ್ ಶರಣರು ಮಾತನಾಡಿದರು.

ಚಿಂತಕ ಪ್ರೊ. ಶಿವಶರಣಪ್ಪ ಹುಗ್ಗೆ ಪಾಟೀಲ್ ಅವರು ಮಾತನಾಡಿ, ಜೀವಜಗತ್ತಿಗೆ ಸಮತೆ, ಮಮತೆ, ಪ್ರೀತಿ, ಕರುಣೆ ಹಾಗೂ ಶಾಂತಿಯನ್ನು ನೀಡಿದ ಗೌತಮ ಬುದ್ಧರ ಮಹಾದ್ವಾರವು ಮೈತ್ರಿಭಾವನೆ ಮತ್ತು ಭಾವೈಕ್ಯತೆಯ ಸಂದೇಶವನ್ನು ಸಾರುತ್ತದೆ. ಸಂಚಲಿತ ಸಮಾಜಕ್ಕೆ ಸ್ಥಿರ ಮೌಲ್ಯಗಳನ್ನು ಬಿತ್ತಿದವರು ಬುದ್ಧ, ಬಸವ ಹಾಗೂ ಡಾ. ಅಂಬೇಡ್ಕರ್ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಡಾ. ಧಮ್ಮಾನಂದ ಥೇರೋ ಅವರು ತ್ರಿಶರಣ ಪಂಚಶೀಲ ಬೋಧಿಸಿದರು. ಸಮತಾ ಸೈನಿಕ ದಳ ವತಿಯಿಂದ ನೀಲಾ ಸಲಾಮಿ ಸಲ್ಲಿಸಲಾಯಿತು.

ಅಂಬಾದಾಸ್ ಗಾಯಕವಾಡ ಅವರು ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಪರಮೇಶ್ವರ ಗುಬ್ಬಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸದಸ್ಯ ಸಂತೋಷ ಸಂಗಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣ ಆಣದೂರು, ಪ್ರಭುಲಿಂಗ ವೀರಶೆಟ್ಟಿ ಕಾಂಬಳೆ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಗ್ರಾಮದ ಭಜನಾ ತಂಡದವರು ಭಜನಾ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

Share This Article
Leave a Comment