ಯಾದಗಿರಿ: ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷ, ವಿವಿಧ ರೈತ ಸಂಘಟನೆಗಳು ಹಾಗೂ ನಾಗರಿಕ ಸಮಿತಿಗಳ ವತಿಯಿಂದ ಯಾದಗಿರಿ ಜಿಲ್ಲೆಯ ಗಡಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ವಿರುದ್ಧ ಹಾಗೂ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮೇ 13ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ–ತೆಲಂಗಾಣ ಗಡಿಭಾಗದ ಚೆಲ್ಹೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ನೈಸರ್ಗಿಕ ಸಂಪತ್ತಿನ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದರು. ಈ ಕುರಿತು ಏಪ್ರಿಲ್ 6ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಗಡುವು ನೀಡಲಾಗಿತ್ತು. ಬಳಿಕ ಏಪ್ರಿಲ್ 22ರಂದು ಗಡಿಭಾಗದಲ್ಲೇ ಸತ್ಯಾಗ್ರಹ ನಡೆಸಿದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಜನಸಾಮಾನ್ಯರು ಹಾಗೂ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಗಡಿಭಾಗದ ಗ್ರಾಮಗಳ ಪರಿಸರ ಮತ್ತು ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಇದಕ್ಕೆ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖ ಬೇಡಿಕೆಗಳು
ಗಡಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು.
ಕರ್ತವ್ಯ ಲೋಪ ಎಸಗುತ್ತಿರುವ ಜಿಲ್ಲಾಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಬೇಕು.
ಗಡಿಭಾಗದ ಸಮಸ್ಯೆ ಕುರಿತು ತೆಲಂಗಾಣ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸದಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಜಿಲ್ಲೆಯ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಹೋರಾಟಕ್ಕೆ ರೈತರು, ನಾಡಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕು ಎಂದು ಮುಖಂಡರು ಮನವಿ ಮಾಡಿದರು.