ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ಒಂದು ವೇಳೆ ಪಕ್ಷ ಬದಲಾವಣೆ ನಿರ್ಧರಿಸಿದರೆ, ಶಾಸಕರ ಅಭಿಪ್ರಾಯ ಪಡೆದು ಪರ್ಯಾಯವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೋಳೂರು-ಕಾಟ್ರಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾಗುತ್ತಿರುವ ಗೊಂದಲಗಳಿಗೆ ತೆರೆ ಬೀಳಲು ಸಚಿವ ಸಂಪುಟ ಪುನರ್‌ರಚನೆ ಅಗತ್ಯವಿದೆ ಎಂದರು. 25 ಮಂದಿ ಸಚಿವರನ್ನು ಬದಲಿಸಿ ಹೊಸಬರು ಹಾಗೂ ಹಿರಿಯರಿಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುರಿತು ಪ್ರತಿಕ್ರಿಯಿಸಿದ ರಾಯರಡ್ಡಿ, ಅವರು ಸಿಎಂ ಆಗಬಾರದು ಎಂದು ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮನ್ನು ಯಾರೊಬ್ಬರ ಬೆಂಬಲಿಗನಲ್ಲ, ಕಾಂಗ್ರೆಸ್ ಪಕ್ಷದ ಬೆಂಬಲಿಗ ಎಂದು ಹೇಳಿದ ಅವರು, ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಉತ್ತಮವಾಗಿದ್ದು ಅವರ ಪರವಾಗಿ ಮಾತನಾಡುತ್ತೇನೆ ಎಂದರು.