
ಕಲಬುರ್ಗಿ, ಜೂ.೩- ಅಶೋಕನಗರ ಠಾಣೆಯ ಪೋಲಿಸರು ಕಾರ್ಯಾಚರಣೆ ಕೈಗೊಂಡು ಏಳು ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಕುಖ್ಯಾತ ಕಳ್ಳನಿಗೆ ಬಂಧಿಸಿ ಸುಮಾರು ಹತ್ತು ಲಕ್ಷ ಮೂವತ್ತು ಸಾವಿರ ರೂ.ಗಳ ಸ್ವತ್ತು ವಶಪಡಿಕೊಂಡಿದ್ದಾರೆ ಎಂದು ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಅವರು ಹೇಳಿದರು.
ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿ ಮೂಲತಃ ಚಿತ್ತಾಪುರ ತಾಲ್ಲೂಕಿನ ಯರಗಲ್ ಗ್ರಾಮದ ನಿವಾಸಿ, ಹಾಲಿ ವಸ್ತಿ ನಗರದ ಸಂತೋಷ ಕಾಲೋನಿಯ ಚಾಲಕ ಮಲ್ಲಿಕಾರ್ಜುನ ತಂದೆ ದೇವಿಂದ್ರಪ್ಪ ತಳವಾರನಿಗೆ ಬಂಧಿಸಲಾಗಿದೆ ಎಂದರು.
ಬಂಧಿತ ಆರೋಪಿಯು ಏಳು ಮನೆಗಳ್ಳತನ ಪ್ರಕರಣಗಳನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಹತ್ತು ಲಕ್ಷ ರೂ.ಗಳ ಮೌಲ್ಯದ ೬೩ ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ ನಗದು ೩೦ ಸಾವಿರ ರೂ.ಗಳನ್ನು ವಶಪಡಿಸೊಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಳೆದ ಮಾರ್ಚ್ ೧ರಂದು ಮೂಲತಃ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ನಿವಾಸಿ, ಹಾಲಿ ವಸ್ತಿ ನಗರದ ಬುದ್ಧವಿಹಾರದ ಎದುರುಗಡೆ ಪ್ರದೇಶದಲ್ಲಿ ತಮ್ಮ ಮನೆಯ ಬೀಗ ಮುರಿದು ೧.೫೦ ಲಕ್ಷ ರೂ.ಗಳ ಮೌಲ್ಯದ ೩೦ ಗ್ರಾಮ ತೂಕದ ಮಂಗಳಸೂತ್ರ, ೫೦೦೦೦ರೂ.ಗಳ ಮೌಲ್ಯದ ಹತ್ತು ಗ್ರಾಂ ತೂಕದ ಚಿನ್ನದ ಲಾಕೇಟ್, ೨೫೦೦೦ರೂ.ಗಳ ಮೌಲ್ಯದ ಐದು ಗ್ರಾಮ್ ತೂಕದ ಚಿನ್ನದುಂಗುರ, ೨೫೦೦೦ರೂ.ಗಳ ಮೌಲ್ಯದ ಐದು ಗ್ರಾಂ ಬಂಗಾರದ ಜುಮಕಿ, ಹತ್ತು ಸಾವಿರ ಮೌಲ್ಯದ ನೂರು ಗ್ರಾಮ್ ತೂಕದ ಎರಡು ಬೆಳ್ಳಿ ಚೈನುಗಳು, ನಗದು ಐದು ಸಾವಿರ ರೂ.ಗಳನ್ನು ಕಳ್ಳತನ ಮಾಡಿದ್ದಾಗಿ ಅಶೋಕ ನಗರ ಠಾಣೆಯ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದರು ಎಂದು ಅವರು ತಳಿಸಿದರು.
ಎಸಿಪಿ ಶರಣಪ್ಪ ಸುಬೇದಾರ್, ಪಿಐ ಸತೀಶ್ ಕಣಮೇಶ್ವರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ವೈಜನಾಥ, ಶಿವಪ್ರಕಾಶ್, ಮುಜಾಹಿದ್, ಕರಣ್, ನೀಲಕಂಠರಾಯ, ಚಂದ್ರಶೇಖರ, ಹರಿಕಿಶೋರ್ ಅವರು ಕಾರ್ಯಾಚರಣೆ ಕೈಗೊಂಡು ಮಾಹಿತಿ ಕಲೆ ಹಾಕಿದರು. ಬಿದ್ದಾಪುರ ಕಾಲೋನಿ ಹತ್ತಿರ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಮಲ್ಲಿಕಾರ್ಜುನ ತಳವಾರನಿಗೆ ಹಿಡಿದು ವಿಚಾರಣೆ ಮಾಡಿದಾಗ ಏಳು ಕಳ್ಳತನ ಪ್ರಕರಣಗಳು ಪತ್ತೆಯಾದವು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಉಪ ಪೋಲಿಸ್ ಆಯುಕ್ತರಾದ ಶ್ರೀಮತಿ ಶಾಲು ಹಾಗೂ ಪ್ರಚೀಣ್ ಎಚ್. ನಾಯಕ್ ಅವರು ಉಪಸ್ಥಿತರಿದ್ದರು.