ಕಲಬುರ್ಗಿ, ಜೂ.೩- ತಾಲ್ಲೂಕಿನ ಜಂಬಗಾ(ಬಿ) ಗ್ರಾಮದಲ್ಲಿ ಕುರಿಗಾಹಿ ಬಂಡು ತಾಂಬೆ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರ ಬಂಧಿಸಲಾಗುವುದು ಎಂದು ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಅವರು ಹೇಳಿದರು.
ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ಯೆಯಾದ ವ್ಯಕ್ತಿಯ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ವ್ಯಕ್ತಿಯೇ ಕೃತ್ಯ ಎಸಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಆ ಕುರಿತು ಆರೋಪಿಯನ್ನು ಬಂಧಿಸುವ ಕಾರ್ಯ ಮುಂದುವರೆದಿದೆ ಎಂದರು.
ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಅರಕೇರಿ ಗ್ರಾಮದ ಬಂಡು ತಾಂಬೆ ಹಾಗೂ ಇನ್ನಿತರ ಕುರಿಗಾಹಿಗಳು ಒಂದು ತಂಡವಾಗಿ ಕುರಿಗಳನ್ನು ಮೇಯಿಸುತ್ತ ಹೋಗುತ್ತಿದ್ದಾಗ ಜಂಬಗಿ(ಬಿ) ಗ್ರಾಮದಲ್ಲಿ ಬಂಡು ಹತ್ಯೆ ಪ್ರಕರಣ ವರದಿಯಾಗಿದೆ. ಒಟ್ಟು ಮೂವರು ಕುರಿಗಾಹಿಗಳು ಕಣ್ಮರೆಯಾಗಿರುವ ಕುರಿತು ಮಾಹಿತಿ ಇದ್ದು, ಅದರಲ್ಲಿ ಬಂಡು ಹತ್ಯೆಯಾಗಿದ್ದು, ಉಳಿದ ಇಬ್ಬರು ಕುರಿಗಾಹಿಗಳು ಪರಾರಿಯಾಗಿದ್ದಾರೆ. ಅದರಲ್ಲಿ ಒಬ್ಬಾತ ಮೃತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಅದೇ ಕಾರಣಕ್ಕೆ ಹತ್ಯೆ ಮಾಡಿರುವ ಕುರಿತು ಸಬ್ ಅರ್ಬನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದರು.
ಇನ್ನು ಮುಂದೆ ಹೆಲ್ಮೆಟ್ ಕಡ್ಡಾಯ ಸೇರಿದಂತೆ ಸಂಚಾರಿ ನಿಯಮಗಳನ್ನು ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಬೇಸಿಗೆಯ ಸಂದರ್ಭದಲ್ಲಿ ಹೆಲ್ಮೇಟ್‌ಗೆ ವಿನಾಯಿತಿ ಕೊಡಬೇಕು ಎಂಬ ಬೇಡಿಕೆ ಇತ್ತು. ಹೀಗಾಗಿ ನಾವು ಆದಷ್ಟು ಜಾಗೃತಿ ಮೂಡಿಸಿದ್ದೇವೆ. ಆದಾಗ್ಯೂ, ಸಂಚಾರಿ ನಿಯಮಗಳ ಉಲ್ಲಂಘನೆ ಯಥೇಚ್ಛವಾಗಿ ಮುಂದುವರೆದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇನ್ನು ಮುಂದೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡಲಾಗದು. ಅಪ್ರಾಪ್ತರಿಗೆ ವಾಹನಗಳನ್ನು ಚಲಾಯಿಸುವುದನ್ನು, ಬೈಕ್ ಮೇಲೆ ತ್ರಿಬಲ್ ಸವಾರಿ, ಸಂಚಾರಿ ಸಿಗ್ನಲ್‌ಗಳನ್ನು ಉಲ್ಲಂಘಿಸುವುದು ಸೇರಿದಂತೆ ಸಂಚಾರಿ ನಿಯಮಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದು. ಹಾಗೊಂದು ವೇಳೆ ಉಲ್ಲಂಘಿಸಿದರೆ ದಂಡ ತಪ್ಪಿದ್ದಲ್ಲ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಉಪ ಪೋಲಿಸ್ ಆಯುಕ್ತರಾದ ಶ್ರೀಮತಿ ಶಾಲು ಹಾಗೂ ಪ್ರಚೀಣ್ ಎಚ್. ನಾಯಕ್ ಅವರು ಉಪಸ್ಥಿತರಿದ್ದರು.