40 ವರ್ಷದ ಬೇಡಿಕೆಗೆ ಸ್ಪಂದನೆ: ಬರೂರಿನಲ್ಲಿ ಸೇತುವೆ ನಿರ್ಮಾಣ ಆರಂಭ

ಬೀದರ್, ಜೂ. 23: ಕ್ಷೇತ್ರದ ಬರೂರ ಗ್ರಾಮದ ಜನರ ಸುಮಾರು ನಾಲ್ಕು ದಶಕಗಳ ಕನಸಾಗಿದ್ದ ಸೇತುವೆ ನಿರ್ಮಾಣ ಕಾಮಗಾರಿಗೆ ಸೋಮವಾರ ಅಧಿಕೃತ ಚಾಲನೆ ದೊರಕಿದ್ದು, ₹4 ಕೋಟಿ ಅಂದಾಜು ವೆಚ್ಚದ ಬಾಕ್ಸ್ ಕಲ್ವರ್ಟ್ (ಸೇತುವೆ) ನಿರ್ಮಾಣಕ್ಕೆ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಗುದ್ದಲಿ ಪೂಜೆ ನೆರವೇರಿಸಿದರು.

ಚಿಂತಲಗೇರ ಕ್ರಾಸ್‌ನಿಂದ ಬರೂರ (ತೆಲಂಗಾಣ ಗಡಿವರೆಗೆ) ಸಂಪರ್ಕಿಸುವ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಈ ಸೇತುವೆ ಕಾಮಗಾರಿಯು ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ನೆರವಾಗಲಿದ್ದು, ಮಳೆಗಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿದೆ ಎಂದು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಮಳೆಗಾಲದಲ್ಲಿ ಪ್ರವಾಹದಿಂದ ರಸ್ತೆ ಸಂಪೂರ್ಣ ಮುಳುಗಡೆಯಾಗಿ ಬರೂರ ಗ್ರಾಮದ ಪ್ರಭಾಕರ್ ಅವರು ಮೃತಪಟ್ಟಿದ್ದ ದುರ್ಘಟನೆ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರ ಬಹುಕಾಲದ ಬೇಡಿಕೆ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದಿಂದ ₹4 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದ್ದು, ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

‘ಸಾರ್ವಜನಿಕರ ಜೀವ ರಕ್ಷಣೆ ಮತ್ತು ಸುರಕ್ಷಿತ ಸಂಚಾರ ನಮ್ಮ ಮೊದಲ ಆದ್ಯತೆಯಾಗಿದೆ. ಮಳೆಗಾಲದಲ್ಲಿ ಜನರು ಯಾವುದೇ ತೊಂದರೆ ಅನುಭವಿಸದಂತೆ ಗುಣಮಟ್ಟದ ಮೂಲಸೌಕರ್ಯಗಳನ್ನು ನಿರ್ಮಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಬರೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ವರ್ಷಪೂರ್ತಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರಾವ್ ಮಲ್ಕಾಪುರ ಮಾತನಾಡಿ, ಸುಮಾರು 40 ವರ್ಷಗಳಿಂದ ಗ್ರಾಮಸ್ಥರು ಸೇತುವೆ ನಿರ್ಮಾಣಕ್ಕಾಗಿ ಹೋರಾಟ ನಡೆಸುತ್ತಿದ್ದರು. ಮಳೆಗಾಲದಲ್ಲಿ ಸಂಪರ್ಕ ಕಡಿತಗೊಂಡು ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದರು. ಇದೀಗ ಕಾಮಗಾರಿಗೆ ಚಾಲನೆ ದೊರೆತಿರುವುದು ಗ್ರಾಮಸ್ಥರ ಬಹುಕಾಲದ ಕನಸನ್ನು ನನಸಾಗಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಗ್ರಾಮಸ್ಥ ದಯಾನಂದ ರೆಡ್ಡಿ ಮಾತನಾಡಿ, ಮಳೆಗಾಲದಲ್ಲಿ ನಿರಂತರವಾಗಿ ಎದುರಾಗುತ್ತಿದ್ದ ಸಂಚಾರದ ಸಮಸ್ಯೆಗೆ ಈ ಸೇತುವೆ ಶಾಶ್ವತ ಪರಿಹಾರ ನೀಡಲಿದೆ. ಗ್ರಾಮದ ಜನರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿ ಕಾಮಗಾರಿ ಆರಂಭಿಸಿರುವುದು ಸಂತಸದ ವಿಷಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗುರುನಾಥ ರಾಜಗೀರ್, ಸುರೇಶ್ ಮಾಶೆಟ್ಟಿ, ಚಂದ್ರಯ್ಯ ಸ್ವಾಮಿ, ಅನೀಲ್ ಪನ್ನಾಳೆ, ಮಲ್ಲಿಕಾರ್ಜುನ ಮೂಲಗಿ, ಗೋಪಾಲ ರೆಡ್ಡಿ, ಬಸವರಾಜ್ ಪವಾರ್, ಶಿವಕಾಂತ ಶೇಖಾಪುರ, ರಾಜಶೇಖರ್ ರೆಡ್ಡಿ, ಇಂದ್ರಾ ರೆಡ್ಡಿ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Share This Article
Leave a Comment