ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ: ಕೆರಳಿದ ಕುರುಬ ಸಮಾಜದ ಪ್ರತಿಭಟನೆ..! ಕಾಂಗ್ರೆಸ್ ವರಿಷ್ಠರ ಪ್ರತಿಕೃತಿ ಹರಿದು ಹಾಕಿ ಆಕ್ರೋಶ..!

 

ಕಲಬುರ್ಗಿ, ಮೇ.೨೮- ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಾಮಯ್ಯ ಅವರು ರಾಜೀನಾಮೆ ನೀಡಿದ್ದನ್ನು ಖಂಡಿಸಿ ಕುರುಬ ಸಮಾಜದವರು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರ ಪ್ರತಿಕೃತಿ ಹರಿದುಹಾಕಿ, ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕುರುಬ ಸಮಾಜದ ಜಿಲ್ಲಾಧ್ಯಕ್ಷ ಗುರುನಾಥ ಎಸ್. ಪೂಜಾರಿ ಅವರ ನೇತೃತ್ವದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆದ ಪ್ರತಿಭಟನೆಯಲ್ಲಿ ಅಮೋಘಸಿದ್ಧ, ಕುಪೇಂದ್ರ ಬರಗಾಲಿ, ಲಕ್ಷö್ಮಣ್ ಎಸ್. ಪೂಜಾರಿ, ರೇವಣಸಿದ್ದಪ್ಪ ಸಾತನೂರ್, ತಿಪ್ಪಣ್ಣ ವಗ್ಗರ ರಾವೂರ್ ಶಹಾಬಾದ್, ಹೂವಣ್ಣಾ ವಟವಟಿ ಕಾಳಗಿ, ನಿಂಗಣ್ಣ ಮತ್ತಿಮೂಡ, ಬಸವರಾಜ್ ಸ. ಅಂಬಲಗಿ ಕಮಲಾಪುರ, ನಾಗೇಂದ್ರಪ್ಪಾ ಪೂಜಾರಿ,ಭೀಮಾಶಂಕರ ಬಂಗರಗಿ, ಶರಣಬಸಪ್ಪ ಕರಗಾರ್, ಭೀಮಶ್ಯಪ್ಪಾ ಸೇಡಂ, ಕರೇಜಗೌಡ ಯಡ್ರಾಮಿ, ಪ್ರಭುದೇವ್ ಯಳಸಂಗಿ, ಸಂಜುಕುಮಾರ ಚಿಂಚೋಳಿ, ಬಸವರಾಜ್ ಈಶ್ವಾರ, ವಾಡಿ, ಮಾಳಪ್ಪ ಪೂಜಾರಿ ಮಳ್ಳಿ ಯಡ್ರಾಮಿ, ಸಂತೋಷಕುಮಾರ್ ಜೇವರ್ಗಿ, ಶಿವಶರಣಪ್ಪ ಪೂಜಾರಿ ಸೇಡಂ, ಜಗನ್ನಾಥ ನಾಗೂರ್, ಪ್ರಭುಲಿಂಗ ಜುಮ್ಮಣ್ಣ, ತುಳಜಪ್ಪಾ ಅಂಬಣ್ಣ ತಿಪ್ಪಗೊಂಡ ಚಿಂಚೋಳಿ, ನಾಗೇಂದ್ರಪ್ಪ ಗಂಗಾಣಿ ಅಫಜಲಪುರ, ಯಲ್ಲಾಲಿಂಗ ಎಸ್. ಅಂದೊಡಗಿ ಅಫಜಲಪುರ, ತುಕ್ಕಪ್ಪಾ ಪೂಜಾರಿ ಶಿವಾಜಿನಗರ, ಬೀರಪ್ಪ ಮಾರಡಗಿ ಕಟ್ಟಿಸಂಗಾವಿ ಜೇವರ್ಗಿ, ಬಸವರಾಜ್ ಬೆನಕನಳ್ಳಿ ಸೇಡಂ ಮುಂತಾದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತಿಭಟನೆಕಾರರು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ, ಪಕ್ಷದ ವರಿಷ್ಠರಾದ ಶ್ರೀಮತಿ ಸೋನಿಯಾಗಾಂಧಿ, ಪ್ರಿಯಾಂಕಾ ವಾಡ್ರಾ, ರಾಹುಲ್‌ಗಾಂಧಿ ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಹಾಕಿದರು. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಕೃತಿಗಳಿಗೆ ದಹಿಸಿ ಪ್ರತಿಭಟಿಸಲು ಯತ್ನಿಸಿದಾಗ ಪೋಲಿಸರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕುಪಿತರಾದ ಪ್ರತಿಭಟನೆಕಾರರು ಕಾಂಗ್ರೆಸ್ ಪಕ್ಷದ ವರಿಷ್ಠರ ಪ್ರತಿಕೃತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಬೆಂಕಿ ಹತ್ತಿದೆ. ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿದರೆ ಏನಾಗುತ್ತದೆ? ಎಂದು ಪ್ರತಿಭಟನೆಕಾರರು ಖಾರವಾಗಿ ಪೋಲಿಸರಿಗೆ ಪ್ರಶ್ನಿಸಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಕಾಂಗ್ರೆಸ್ ಪಕ್ಷದ ವರಿಷ್ಠರಾದ ರಾಹುಲ್‌ಗಾಂಧಿ, ಡಾ. ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿ, ಸಿದ್ಧರಾಮಯ್ಯ ಅವರು ಪೂರ್ಣಾವಧಿಯವರೆಗೆ ೨೦೨೮ರವರೆಗೆ ಮುಖ್ಯಮಂತ್ರಿಗಳಾಗಿ ಮುಂದುವರೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿದ್ಧರಾಮಯ್ಯನವರು ಅಹಿಂದ ನಾಯಕನಾಗಿ ಹಿಂದುಳಿದ ವರ್ಗಗಳು, ದಲಿತರು. ಹಾಗೂ ಅಲ್ಪ ಸಂಖ್ಯಾತರ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸಿದ ನಿಷ್ಠಾವಂತ ರಾಜಕಾರಣಿ ಆಗಿದ್ದಾರೆ. ಎಂದು ಪ್ರಂಶುಸಲಾಗಿದೆ. ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ನಂತರ ಹಿಂದುಳಿದ ವರ್ಗಗಳ ಪರವಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದ ನಾಯಕರೆಂದರೆ ಅದು ಸಿದ್ಧರಾಮಯ್ಯ. ೨೦೦೬ರಲ್ಲಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಸಿದ್ಧರಾಮಯ್ಯ ಅವರು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು.

೨೦೦೮ರಿಂದ ೨೦೧೩ರವರೆಗೆ ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ಹಗರಣಗಳನ್ನು ಬಹಿರಂಗಪಡಿಸಿ ಜನರ ಗಮನ ಸೆಳೆದರು. ೨೦೧೩ ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಅನ್ನಭಾಗ್ಯ. ಕ್ಷೀರಭಾಗ್ಯ, ಕೃಷಿಭಾಗ್ಯ ವಿದ್ಯಾಶ್ರೀ, ಶಾದಿಭಾಗ್ಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು. ೨೦೨೩ರ ಚುನಾವಣೆಯಲ್ಲಿ ನೀಡಿದ ೫ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ ಎಂದು ಅವರು ಬಣ್ಣಿಸಿದರು.

ಯಾವುದೇ ಕಾರಣವಿಲ್ಲದೆ ಹಿಂದುಳಿದ ನಾಯಕರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವುದು ದುಃಖಕರ ಸಂಗತಿಯಾಗಿದೆ. ಆದ್ದರಿಂದ ೨೦೨೮ರವರೆಗೆ ಸಿದ್ಧರಾಮಯ್ಯರವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶ ನೀಡಬೇಕು. ಇಲ್ಲದೇ ಹೋದಲ್ಲಿ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

Share This Article
Leave a Comment