ಅಳ್ಳೊಳ್ಳಿ ಬಾವಿಯಲ್ಲಿ 9 ವರ್ಷದ ಬಾಲಕನ ಶವ ಪತ್ತೆ

ಸೇಡಂ, ಜೂ. 23: ತಾಲ್ಲೂಕಿನ ಅಳ್ಳೊಳ್ಳಿ ಗ್ರಾಮದಲ್ಲಿ ಒಂಬತ್ತು ವರ್ಷದ ಬಾಲಕನ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತ ಬಾಲಕನನ್ನು ನಿತೀಶ್ ಹುಳಗೋಳ್ (9) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಗ್ರಾಮದಲ್ಲಿ ನಡೆದ ಮೊಹರಂ ಹಬ್ಬದ ಕಾರ್ಯಕ್ರಮ ವೀಕ್ಷಿಸಲು ತೆರಳಿದ್ದ ನಿತೀಶ್ ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ವಿವಿಧೆಡೆ ಹುಡುಕಾಟ ನಡೆಸಿದರೂ ಆತನ ಸುಳಿವು ಸಿಕ್ಕಿರಲಿಲ್ಲ.

ಬಾಲಕ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರ ಬೆನ್ನಲ್ಲೇ ಸೋಮವಾರ ಬೆಳಿಗ್ಗೆ ಗ್ರಾಮದ ಬಾವಿಯೊಂದರಲ್ಲಿ ನಿತೀಶ್‌ನ ಶವ ಪತ್ತೆಯಾಗಿದೆ.

ಈ ಸಂಬಂಧ ಬಾಲಕನಿಗೆ ಕೊಲೆ ಮಾಡಿ ಬಾವಿಗೆ ಎಸೆಯಲಾಗಿದೆ ಎಂದು ಆರೋಪಿಸಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ಮರಣದ ನಿಖರ ಕಾರಣ ಮರಣೋತ್ತರ ಪರೀಕ್ಷೆ ವರದಿ ಹಾಗೂ ತನಿಖೆಯ ನಂತರವೇ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share This Article
Leave a Comment