ಚಿತ್ತಾಪುರದಲ್ಲಿ ಶಾಂತಿ ಸಭೆ| ಶಾಂತಿಯುತವಾಗಿ ಬಕ್ರಿದ್ ಹಬ್ಬ ಆಚರಿಸಲು ಡಿವೈಎಸ್ಪಿ ಪಾಟೀಲ್ ಕರೆ.

 

ಚಿತ್ತಾಪುರ, ಮೇ.೨೬- ಎಲ್ಲ ಧರ್ಮದ ಮುಖಂಡರು ಮತ್ತು ಸಾರ್ವಜನಿಕರು ಒಟ್ಟಾಗಿ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು ಯಾವುದೇ ಗೊಂದಲ, ಅಶಾಂತಿಗೆ ಆಸ್ಪದ ನೀಡಬಾರದು ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರು ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕು ಆಡಳಿತದ ಜೊತೆಗೆ ಸಾರ್ವಜನಿಕರು ಅವರವರ ಜವಾಬ್ದಾರಿ ಸರಿಯಾಗಿ ನಿರ್ವಹಿಸಿದಾಗ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.

ಯಾವುದೇ ಘಟನೆ ಅಥವಾ ಅಕ್ರಮ ನಡೆದರೆ ಕೂಡಲೇ ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ, ನೈತಿಕ ಪೊಲೀಸ್ ಗಿರಿಗೆ ಅವಕಾಶ ಇಲ್ಲ, ನಾವು ಮಾಡುವ ಕೆಲಸ ನೀವು ಮಾಡಿದರೆ ಆಗ ನಮ್ಮ ಕೆಲಸ ಪ್ರಾರಂಭವಾಗುತ್ತದೆ ಎಂದು ಅವರು ಎಚ್ಚರಿಸಿದರು.

ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡಲು ಪಿಡಿಒಗಳಿಗೆ ಸೂಚಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಹಾಗೂ ಪಟ್ಟಣದ ಸ್ವಚ್ಛತೆಗೆ ಪುರಸಭೆ ಅಧಿಕಾರಿಗೆ ಸೂಚಿಸಿದರು. ಕಾನೂನಿಗೆ ಗೌರವ ನೀಡುವ ಮೂಲಕ ಕಾನೂನು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಜಾಗ್ರತೆ ವಹಿಸಬೇಕು ಎಂದು ಅವರು ಹೇಳಿದರು.

ತಹಸಿಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಭಾರತ ದೇಶದಲ್ಲಿ ಹಬ್ಬಗಳನ್ನು ಎಲ್ಲರೂ ಶಾಂತಿ ಸೌಹಾರ್ದತೆ ಹಾಗೂ ಸಂಭ್ರಮದಿAದ ಆಚರಿಸಬೇಕು. ಈ ನಿಟ್ಟಿನಲ್ಲಿ ಬಕ್ರೀದ್ ಹಬ್ಬದ ಆಚರಣೆಗೆ ದಕ್ಕೆ ಬಾರದಂತೆ ಹಾಗೂ ಯಾರೂ ಕಾನೂನು ಮೀರದಂತೆ ಜಾಗ್ರತೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ಅಕ್ರಂ ಪಾಷಾ, ಸಿಪಿಐ ಸಿದ್ಧಬಸವನಗೌಡ ಪಾಟೀಲ್, ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ. ಶಂಕರ ಕಣ್ಣಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಅಲ್ಪಸಂಖ್ಯಾತರ ಮುಖಂಡ ಮುಕ್ತಾರ್ ಪಟೇಲ್, ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ್ ಭಂಕಲಗಿ, ಚಂದ್ರಶೇಖರ ಕಾಶಿ, ಬಾಬು ಕಾಶಿ ಅವರು ಮಾತನಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಕಾಳಗಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಬೊಮ್ಮನಳ್ಳಿ, ಮುಖಂಡರಾದ ಶ್ರೀನಿವಾಸ ರೆಡ್ಡಿ ಪಾಲಪ್, ಮಲ್ಲಿಕಾರ್ಜುನ್ ಪೂಜಾರಿ, ಭೀಮಣ್ಣ ಕರದಳ್ಳಿ, ಅನೀಲ್ ವಡ್ಡಡಗಿ, ಉದಯಕುಮಾರ್ ಸಾಗರ್, ಮಲ್ಲಿಕಾರ್ಜುನ್ ಬೆಣ್ಣುರಕರ್, ದಶರಥ ದೊಡ್ಡಮನಿ, ಭೀಮಸಿಂಗ ಚವ್ಹಾಣ, ನಜೀರ್ ಆಡಕಿ, ನಾಗೇಂದ್ರ ಡಿಗ್ಗಿ, ಸದ್ದಾಂ ಕರದಾಳ, ಗಂಗಾಧರ ಮಳಖೇಡ, ದೇವಿದಾಸ್ ಚವ್ಹಾಣ, ಹಣಮಂತ ಕಟ್ಟಿಮನಿ, ಮಹ್ಮದ್ ಯಟ್ಬಾಲ್, ಫಾರೂಖ್ ಪಟೇಲ್, ಮುಜೀಬ್ ಜುನೈದಿ, ಅಬ್ದುಲ್ ಖಾದರ್, ಸುಭಾಷ್ ಜಾಧವ್, ನಾಗರಾಜ್ ರೇಶ್ಮಿ ಮುಂತಾದವರು ಉಪಸ್ಥಿತರಿದ್ದರು. ಪಿಎಸ್‌ಐ ಮಂಜುನಾಥ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಎಸ್‌ಐ ಬಾಬು ಇಂಚಗೇರಿ ನಿರೂಪಿಸಿದರು.

Share This Article
Leave a Comment