ಜೇವರ್ಗಿ, ಜೂ.೧೮- ಸಾಲ ಬಾಧೆಯಿಂದ ಬೇಸತ್ತು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಯುವ ರೈತ ಆನಂದ ರಾಠೋಡ (೨೭) ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಮೃತ-ಪಟ್ಟಿದ್ದಾರೆ. ತಾಲ್ಲೂಕಿನ ಜೈನಾಪೂರ ಗ್ರಾಮದಲ್ಲಿ ಈ ಅವಘಡ ನಡೆದಿದೆ.
ತನ್ನ ಸ್ವಂತ ೪ ಎಕರೆ ಸೇರಿದಂತೆ ಬೇರೆಯವರ ೨೦ಕ್ಕೂ ಹೆಚ್ಚು ಎಕರೆ ಜಮೀನು ಲೀಸ್ ಹಾಕಿಕೊಂಡು ಕೃಷಿ ಮಾಡುತ್ತಿದ್ದರು. ಕಳೆದ ವರ್ಷದ ಅತಿವೃಷ್ಟಿಯಿಂದ ಬೆಳೆ ಕೈಕೊಟ್ಟಿದ್ದರಿಂದ ನಷ್ಟ ಅನುಭವಿಸಿದ್ದರು. ಕೃಷಿಗಾಗಿ ಪಟ್ಟಣದ ಎಚ್ಡಿಎಫ್ಸಿ ಬ್ಯಾಂಕ್, ಆಂದೋಲಾದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಹಾಗೂ ಖಾಸಗಿಯಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಮನನೊಂದು ಜೂನ್ ೪ರಂದು ವಿಷ ಕುಡಿದಿದ್ದರು. ಅವರನ್ನು ಚಿಕಿತ್ಸೆಗಾಗಿ ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.