
ಕಲಬುರಗಿ: ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಗಳನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಇಂದು ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜೇಯೇಂದ್ರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರದ ಕ್ರಮವನ್ನು ಕಾನೂನು ಬಾಹಿರ ಹಾಗೂ ಜನವಿರೋಧಿ ಎಂದು ಆರೋಪಿಸಿ, ಪ್ರಕರಣಗಳನ್ನು ಮರು ದಾಖಲಿಸಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಹಲವು ನಾಯಕರು, ಪವಿತ್ರ ರಾಘವ ಚೈತನ್ಯ ಶ್ರೀ ಶಿವಲಿಂಗ ದೇವಸ್ಥಾನಕ್ಕೆ ಅಪಚಾರ ಎಸಗಿದ ಪ್ರಕರಣದಲ್ಲಿ ಭಾಗಿಯಾಗಿದ್ದವರ ವಿರುದ್ಧದ ಮೊಕದ್ದಮೆಗಳನ್ನು ಹಿಂಪಡೆದಿರುವುದು ಖಂಡನೀಯ ಎಂದು ಹೇಳಿದರು. ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಘಟನೆಗಳಲ್ಲಿ ಭಾಗಿಯಾದವರನ್ನು ರಕ್ಷಿಸುವ ಮೂಲಕ ಸರ್ಕಾರ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾನೂನು ಸುವ್ಯವಸ್ಥೆಯನ್ನು ಕಡೆಗಣಿಸುತ್ತಿದೆ ಎಂದು ದೂರಿದ ಪ್ರತಿಭಟನಾಕಾರರು, ಒಂದು ಸಮುದಾಯವನ್ನು ಓಲೈಸುವ ಉದ್ದೇಶದಿಂದ ಕಾನೂನು ಕ್ರಮಗಳನ್ನು ಹಿಂಪಡೆಯುವುದು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು. ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಯಾವುದೇ ರಾಜಿ ಮಾಡಿಕೊಳ್ಳದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ, ಪ್ರಕರಣಗಳನ್ನು ಪುನಃ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪಕ್ಷದ ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಬೀದರ್ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಬಸವರಾಜ ಮತ್ತಿಮೂಡ್, ಅವಿನಾಶ್ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್ ಹಾಗೂ ಶಶಿಲ್ ನಮೋಶಿ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಸಂಸದ ಡಾ. ಉಮೇಶ್ ಜಾಧವ್, ಮಾಜಿ ಶಾಸಕರಾದ ಸುಭಾಷ್ ಗುತ್ತೇದಾರ್, ಅಪ್ಪುಗೌಡ, ನರಸಿಂಹ ನಾಯಕ್ (ರಾಜು ಗೌಡ) ಸೇರಿದಂತೆ ಹಲವಾರು ಮುಖಂಡರು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಪ್ರತಿಭಟನೆಯ ವೇಳೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.