ಕಲಬುರ್ಗಿ, ಜೂ.೧೭- ರಾಜ್ಯದ ಗೃಹ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಕಲಬುರ್ಗಿಯಲ್ಲಿ ಪಿಎಸ್‌ಐಯೊಬ್ಬರು ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಗರದ ಗಂಗಾನಗರದಲ್ಲಿ ತಡರಾತ್ರಿ ಬೆಳಕಿಗೆ ಬಂದಿದೆ. ಮೃತರಿಗೆ ನಗರ ಪೋಲಿಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಬರುವ ಡಿಸಿಆರ್‌ಬಿ ವಿಭಾಗದ ಪಿಎಸ್‌ಐ ಹಾಗೂ ಗಂಗಾನಗರದ ನಿವಾಸಿ ಬಸವರಾಜ್ ಶಾಂತಪ್ಪ ಹೇರೂರ್ (೩೯) ಎಂದು ಗುರುತಿಸಲಾಗಿದೆ.
ಬಸವರಾಜ್ ಅವರು ಕಳೆದ ಮಂಗಳವಾರ ತಡರಾತ್ರಿ ಗೆಳೆಯರಿಗೆ ಮೊಬೈಲ್ ಕರೆ ಮಾಡಿ ಆತ್ಮಹತ್ಯೆ ವಿಷಯ ಹೇಳಿಕೊಂಡರು. ವಿಷಯ ತಿಳಿದ ಗೆಳೆಯರು ಬಸವರಾಜ್ ಅವರ ತಂದೆಗೆ ಮೊಬೈಲ್ ಕರೆ ಮಾಡಿ ವಿಷಯ ಹೇಳಿದರು. ತಕ್ಷಣ ಅವರ ತಂದೆ ಮನೆಯ ಬಾಗಿಲು ಒಡೆದು ನೋಡುವಷ್ಟರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಸವರಾಜ್ ಅವರು ಪತ್ತೆಯಾದರು.
ಬಸವರಾಜ್ ಹೇರೂರ್ ಅವರು ಕಳೆದ ೨೦೧೪ರ ಬ್ಯಾಚ್ ಪಿಎಸ್‌ಐ ಆಗಿದ್ದರು. ಅವರ ತಂದೆ ಶಾಂತಪ್ಪ ಅವರು ನಿವೃತ್ತ ಮುಖ್ಯ ಗುರುಗಳು. ಪತ್ನಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ. ದಂಪತಿಗೆ ಮೂವರು ಪುತ್ರಿಯರು ಇದ್ದು, ಮಾನಸಿಕ ಕಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಕುಟುಂಬದ ಮೂಲಗಳ ಪ್ರಕಾರ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದಾಗ್ಯೂ, ಕೌಟುಂಬಿಕ ಸಮಸ್ಯೆಗಳು ಇರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ಕುರಿತು ರಾಘವೇಂದ್ರ ನಗರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಜಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
ಮೃತ ಪಿಎಸ್‌ಐ ತಂದೆ ಹಾಗೂ ನಿವೃತ್ತ ಮುಖ್ಯ ಗುರುಗಳಾದ ಶಾಂತಪ್ಪ ಹೇರೂರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಮಗನಿಗೆ ಮೊದಲಿನಿಂದಲೂ ಹೊಟ್ಟೆನೋವು ಇತ್ತು. ಆ ಕುರಿತು ಚಿಕಿತ್ಸೆ ಪಡೆಯುತ್ತಿದ್ದರು. ಊಟವನ್ನೂ ಸಹ ಮಾಡುತ್ತಿರಲಿಲ್ಲ. ಹಣ್ಣು ಮತ್ತು ಪಾನೀಯ ಸೇವಿಸುತ್ತಿದ್ದರು. ನಿನ್ನೆಯೂ ಸಹ ಮನೆಗೆ ಬಂದರು. ನಮ್ಮನ್ನು ಸ್ವಲ್ಪ ಹೊತ್ತು ನೋಡಿದರು. ನಾನು ಹಾಗೂ ನನ್ನ ಪತ್ನಿ ಊಟ ಮಾಡಲು ಹೇಳಿದೆವು. ಆ ಕುರಿತು ಏನನ್ನೂ ಹೇಳದೇ ತಮ್ಮ ಕೋಣೆಗೆ ಹೋದರು. ಎರಡು ನಿಮಿಷದ ಮೇಲೆ ಅವರ ಗೆಳೆಯರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ಫೋನ್ ಮಾಡಿದ್ದರ ಕುರಿತು ತಮಗೆ ಕರೆ ಮಾಡಿ ವಿಷಯ ತಿಳಿಸಲಾಯಿತು. ನಾವು ಕೋಣೆಗೆ ಹೋಗಿ ನೋಡುವುದರೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ದು:ಖಿಸಿದರು.
ನಿನ್ನೆ ನಾವು ದಂಪತಿ ಮನೆಯಲ್ಲಿದ್ದಾಗಲೇ ಬಸವರಾಜ್ ಮನೆಗೆ ಬಂದರು. ಏನೋ ಬರೆಯುತ್ತಿದ್ದಾನೆ ಎಂದುಕೊAಡೆವು. ಅಲಮೇರಾದ ಕೀ ತಗೊಂಡಿದ್ದೀರಾ? ಎಂದು ಪ್ರಶ್ನಿಸಿದ. ನಾವು ಇಲ್ಲ ಎಂದು ಹೇಳಿದೆವು. ಬಳಿಕ ಬಸವರಾಜ್ ನೇರವಾಗಿ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡ. ನಂತರ ಬಸವರಾಜ್‌ನ ಗೆಳೆಯರು ನಮಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ನಮಗೆ ಫೋನ್ ಮಾಡಿ ತಿಳಿಸಿದ್ದರಿಂದ ನಾವು ತಕ್ಷಣ ಬಾಗಿಲು ತೆರೆಯುವಂತೆ ಕೂಗಿಕೊಂಡೆವು. ಆತಂಕದಿAದ ಬಾಗಿಲು ಬಡಿದೆವು. ಪಕ್ಕದ ಮನೆಯವರನ್ನು ಕರೆದು ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಅವರು ಕಣ್ಣೀರು ಹಾಕಿದರು.
ಬಸವರಾಜ್ ಆಗಾಗ ಹೊಟ್ಟೆನೋವು ಎನ್ನುತ್ತಿದ್ದ. ಆಗಾಗ ಮದ್ಯ ಕುಡಿಯುತ್ತಿದ್ದ. ಆತ್ಮಹತ್ಯೆಗೆ ಕಾರಣ ಏನೆಂದೂ ಗೊತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ತನ್ನ ಸಹುದ್ಯೋಗಿಗಳ ಜೊತೆಗೆ ಕೆಲಸದ ವಿಚಾರವಾಗಿ ಮಾತನಾಡಿದ್ದಾನೆ. ಕೆಲಸದಲ್ಲೂ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಅವರು ಹೇಳಿದರು. ಸ್ಥಳಕ್ಕೆ ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ನ್ಯೂ ರಾಘವೇಂದ್ರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಬಸವರಾಜ್ ಅವರ ಆತ್ಮಹತ್ಯೆಯಿಂದ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಕೇವಲ ಕುಟುಂಬವಲ್ಲದೇ ಇಡೀ ಗಂಗಾನಗರ ಬಡಾವಣೆಯಲ್ಲಿ ದು:ಖದ ವಾತಾವರಣ ನಿರ್ಮಾಣವಾಗಿದೆ.
ಬಸವರಾಜ್ ಹೇರೂರ್ ಅವರು ನಗರದ ರಾಮ ಮಂದಿರದ ಬಳಿ ಹೊಸ ಮನೆಯೊಂದನ್ನು ನಿರ್ಮಾಣ ಮಾಡಿದ್ದು, ಗೃಹ ಪ್ರವೇಶ ಕಾರ್ಯಕ್ರಮ ಕೆಲವೇ ದಿನಗಳಲ್ಲಿ ನಡೆಯುತ್ತಿತ್ತು ಎನ್ನಲಾಗಿದೆ. ಬಸವರಾಜ್ ಅವರ ನಿಧನದಿಂದ ಶವ ಪರೀಕ್ಷೆಯ ಸಂದರ್ಭದಲ್ಲಿ ಇಡೀ ಕುಟುಂಬಸ್ಥರು ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರ ಸಹೋದರ ಶಿವರಾಯ್ ಕಮಕನೂರ್ ಅವರೂ ಸೇರಿದಂತೆ ಹಲವು ಗಣ್ಯರೂ ಸಹ ಸ್ಥಳದಲ್ಲಿದ್ದು ದು:ಖ ವ್ಯಕ್ತಪಡಿಸಿದರು.