ಕಲಬುರ್ಗಿ, ಜೂ.೧೬- ಹಿಂದಿನ ತರಗತಿಯಿಂದ ಮುಂದಿನ ತರಗತಿಯ ಕಲಿಕೆಗೆ ವಿದ್ಯಾರ್ಥಿಗಳು ಪ್ರವೇಶಿಸುವ ಮುನ್ನ ಸೇತುಬಂಧ ಪರೀಕ್ಷೆಗಳನ್ನು ಸರ್ಕಾರ ನಡೆಸುತ್ತಿದೆ. ಈ ಪರೀಕ್ಷೆಗಳ ಮೌಲ್ಯ ಮಾಪನದಲ್ಲಿ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಅನುಸರಿಸುವ ಮಾನದಂಡವು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ದ್ವಿಭಾಷಾ ಮಾಧ್ಯಮ ಜಾರಿಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿ, ಇಂಗ್ಲೀಷ್ ಮಾಧ್ಯಮದಲ್ಲಿ ಉತ್ತರಿಸಿದರೆ ಮಾತ್ರ ‘ಎ ಶ್ರೇಣಿ’ ಇಡಲಾಗುತ್ತಿದೆ. ಎಷ್ಟೇ ಉತ್ತಮವಾಗಿ ಉತ್ತರ ಬರೆದರೂ, ಕನ್ನಡ ಮಾಧ್ಯಮದಲ್ಲಿ ಉತ್ತರಿಸಿರುವ ವಿದ್ಯಾರ್ಥಿಗಳಿಗೆ ಬಿ ಶ್ರೇಣಿ ನೀಡಲಾಗುತ್ತಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ದೇವದುರ್ಗ ಅವರು ಆರೋಪಿಸಿದ್ದಾರೆ.
ಕಲಿಕೆಯಲ್ಲಿ ಕನ್ನಡಕ್ಕೆ ಎರಡನೇ ಸ್ಥಾನ ನೀಡುತ್ತಿರುವುದು ಮತ್ತು ಕನ್ನಡದಲ್ಲಿ ಬರೆಯುವ ವಿದ್ಯಾರ್ಥಿಗಳಿಗೆ ಮಾನ್ಯತೆ ನೀಡದಿರುವುದು ಸ್ಪಷ್ಟವಾಗಿ ಭಾಷಾ ಆಯ್ಕೆ ಸ್ವಾತಂತ್ರ‍್ಯದ ಉಲ್ಲಂಘನೆಯಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃ ಭಾಷೆಗೆ ಉತ್ತೇಜನೆ ನೀಡುವುದನ್ನು ಕಡ್ಡಾಯಗೊಳಿಸಿರುವ ಸುಪ್ರಿಂಕೋರ್ಟಿನ ಇತ್ತೀಚಿನ ತೀರ್ಪನ್ನು ಕೂಡ ಸರ್ಕಾರವು ಉಲ್ಲಂಘಿಸುತ್ತಿದೆ. ಕರ್ನಾಟಕದ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ಅವರು ಹೇಳಿಕೆಯಲ್ಲಿ ಆಕ್ಷೇಪಿಸಿದ್ದಾರೆ.
ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಕೆಯನ್ನು ಉತ್ತೇಜಿಸಬೇಕಿದ್ದ ಸರ್ಕಾರವೇ ತದ್ವಿರುದ್ಧವಾಗಿ ಕನ್ನಡದ ಆಯ್ಕೆಯೆಡೆಗೆ ನೀರುತ್ತೇಜನೆ ತೋರುತ್ತಿರುವುದು ಕನ್ನಡ ಭಾಷೆ ಮತ್ತು ನಾಡಿನ ಜನತೆಗೆ ಮಾಡಿರುವ ದ್ರೋಹವಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರೊಡನೆ ಸಮಾಲೋಚನೆ ನಡೆಸದೆ ಎಲ್ಲ ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನು ಗಾಳಿಗೆ ತೂರಿ ದ್ವಿಭಾಷಾ ಮಾಧ್ಯಮವನ್ನು ಅಳವಡಿಸಲಾಗಿದೆ. ಇದೇ ಸಮಸ್ಯೆಯ ಮೂಲ. ರಾಜ್ಯ ಸರ್ಕಾರವು ಕೂಡಲೇ ಈ ಕನ್ನಡ ವಿರೋಧಿ ಅವೈಜ್ಞಾನಿಕ ಮತ್ತು ಅಪ್ರಜಾತಾಂತ್ರಿಕ ಕ್ರಮವನ್ನು ಕೈಬಿಡಬೇಕು ಮತ್ತು ಕನ್ನಡ ಮಾಧ್ಯಮದ ಆಯ್ಕೆ ಸ್ವಾತಂತ್ರ‍್ಯವನ್ನು ರಕ್ಷಿಸಿ ಉತ್ತೇಜನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.