ಬೀದರ್, ಜೂ.೧೯- ಜಿಲ್ಲಾ ಪ್ರಾಚಾರ್ಯರ ಸಂಘ ಹಾಗೂ ಜಿಲ್ಲಾ ಪದವಿಪೂರ್ವ ಉಪನ್ಯಾಸಕರ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಸಿದ್ಧಾರ್ಥ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ, ೯ ಮತ್ತು ೧೦ನೇ ತರಗತಿಗಳಿಗೆ ಪದವಿಪೂರ್ವ ಉಪನ್ಯಾಸಕರಿಂದ ತರಗತಿಗಳನ್ನು ತೆಗೆದುಕೊಳ್ಳುವಂತೆ ಸರ್ಕಾರ ಹೊರಡಿಸಿರುವ ಆದೇಶವನ್ನು ಖಂಡಿಸಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪದವಿಪೂರ್ವ ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಾ. ಎಸ್. ಪ್ರಭು ವಹಿಸಿದ್ದರು. ಸರ್ಕಾರದ ಆದೇಶ ಸಂಖ್ಯೆ ಇಪಿ೯ಡಿಪಿಐ ೨೦೨೩ ಮೂಲಕ ಪದವಿಪೂರ್ವ ಉಪನ್ಯಾಸಕರ ಮೇಲೆ ಹೆಚ್ಚುವರಿ ಬೋಧನಾ ಹೊರೆ ಹಾಕಲಾಗಿದ್ದು, ಈ ಕ್ರಮ ಅವೈಜ್ಞಾನಿಕ ಹಾಗೂ ಶಿಕ್ಷಣ ವ್ಯವಸ್ಥೆಗೆ ಹಾನಿಕಾರಕವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸರ್ಕಾರ ಹೊರಡಿಸಿರುವ ಗೆಜೆಟ್ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು. ಇಲ್ಲವಾದಲ್ಲಿ ಜಿಲ್ಲಾ ಪ್ರಾಚಾರ್ಯರ ಸಂಘ ಹಾಗೂ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು. ಸಭೆಯಲ್ಲಿ ಜಿಲ್ಲಾ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಶಿವಕುಮಾರ್ ಕೋಸಂ, ಕಾರ್ಯಾಧ್ಯಕ್ಷ ಶ್ರೀಕಾಂತ ದಾಡಗೆ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಐನಾಪೂರ, ಕಾರ್ಯದರ್ಶಿ ಶಾಂತಕುಮಾರ, ಜಂಟಿ ಕಾರ್ಯದರ್ಶಿ ಸುಮತಿ, ಖಜಾಂಚಿ ನಸಿರುದ್ದೀನ್, ಉಪಾಧ್ಯಕ್ಷೆ ನಾಗವೇಣಿ ಪಾಟೀಲ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಜಕುಮಾರ್, ಸವಿತಾ ಬಲ್ಲೂರಕರ್, ಶಿವಕುಮಾರ್ ಸಾಲಿ, ಏಕನಾಥ, ಭಕ್ತರಾಜ್ ಬಿರಾದಾರ್ ಅವರೂ ಸೇರಿದಂತೆ ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.