ಅಫಜಲಪೂರ : ವಿಜಯಪುರದಲ್ಲಿ ಜಿಲ್ಲೆಯಲ್ಲಿ ಏಪ್ರಿಲ್ 21ರಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವಾವಿದ್ಯಾಲಯದ 17ನೇ ಘಟಿಕೋತ್ಸವ ಸಮಾರಂಭ ಮಂಗಳವಾರ ವಿಜಯಪುರದಲ್ಲಿ ವಿಜೃಂಭಣೆಯಿಂದ ಜರುಗಿತು. ವಿವಿಧ ವಿದ್ಯಾ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಈ ಸಂದರ್ಭದಲ್ಲಿ ಪದವಿ ಹಾಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಈ ಘಟಿಕೋತ್ಸವದಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಘತ್ತರಗಿ ಗ್ರಾಮದ ಕುಮಾರಿ ಮೇಧಿನಿ ನಾರಾಯಣರಾವ ಕುಲಕರ್ಣಿ ಅವರು ಎಂ.ಬಿ.ಎ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕಕ್ಕೆ ಭಾಜನರಾದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಮೇಧನಿ ಅವರಿಗೆ ಪದಕ ಪ್ರದಾನ ಮಾಡಿ ಅಭಿನಂದಿಸಿದರು.
ಮೇಧಿನಿ ಅವರು ತಮ್ಮ ಪರಿಶ್ರಮ, ಶಿಸ್ತು ಮತ್ತು ನಿರಂತರ ಅಧ್ಯಯನದ ಮೂಲಕ ಈ ಸಾಧನೆಯನ್ನು ಸಾಧಿಸಿದ್ದು, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ಅವರ ಈ ಯಶಸ್ಸು ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಲ್ಲೂ ಉನ್ನತ ಶಿಕ್ಷಣದ ಆಸಕ್ತಿ ಹೆಚ್ಚಿಸುವಂತೆ ಮಾಡಿದೆ.
ಮೇಧನಿ ಅವರ -ತಾಯಿ ಹಾಗೂ ಕುಟುಂಬದ ಸದಸ್ಯರು ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದು, ಅವರ ಶಿಕ್ಷಣ ಪ್ರಯಾಣದಲ್ಲಿ ಗುರುಗಳು ನೀಡಿದ ಮಾರ್ಗದರ್ಶನವನ್ನು ಸ್ಮರಿಸಿದರು. “ಮೇಧಿನಿ ನಮ್ಮ ಗ್ರಾಮದ ಹೆಮ್ಮೆ, ಅವರ ಸಾಧನೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಲಿದೆ” ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.
ಸ್ಥಳೀಯ ಗಣ್ಯರು ಹಾಗೂ ಶಿಕ್ಷಣ ಪ್ರೇಮಿಗಳು ಮೇಧನಿ ಅವರನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳತ್ತ ಅವರು ಹೆಜ್ಜೆ ಇಡಲಿ ಎಂದು ಹಾರೈಸಿದರು. ಈ ಸಾಧನೆ ಅಫಜಲಪೂರ ತಾಲೂಕಿಗೆ ಕೀರ್ತಿ ತಂದಿದ್ದು, ಜಿಲ್ಲೆಯಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.
ಘತ್ತರಗಿ ಗ್ರಾಮದ ಈ ಕುವರಿ ಬಂಗಾರದ ಪದಕ ಪಡೆದುಕೊಂಡಿದ್ದು, ತಂದೆಯನ್ನು ಕಳೆದುಕೊಂಡು ಛಲಬಿಡದೆ ಓದಿನಲ್ಲಿ ತೊಡಗಿ ಸಾಧನೆ ಮಾಡಿದ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ಅವಕಾಶ ದೊರಕಿದರೆ ಅವರು ಕೂಡ ಉನ್ನತ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ನಿದರ್ಶನವಾಗಿದೆ