ಅಫಜಲಪೂರ: ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಸುಕ್ಷೇತ್ರ ಟಾಕಳಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆ ಮಹೋತ್ಸವವು ಮೇ 16ರಂದು ಶನಿವಾರ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ನಡೆಯಲಿದೆ.
ಶ್ರೀ ಶ್ರೀ ಶ್ರೀ 1008 ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಕೃಪಾಶೀರ್ವಾದದೊಂದಿಗೆ ಜಾತ್ರಾ ಮಹೋತ್ಸವವನ್ನು ಗ್ರಾಮದ ಸಕಲ ಸದ್ಭಕ್ತಿ ಮಂಡಳಿಯವರು ಆಯೋಜಿಸಿದ್ದಾರೆ.
ಬಹು ಪುರಾತನ ಇತಿಹಾಸ ಹೊಂದಿರುವ ಶ್ರೀ ಚೌಡೇಶ್ವರಿ ದೇವಿಯು ಭೀಮಾ ನದಿಯ ಎಡದಂಡೆಯ ಪಶ್ಚಿಮ ವಾಹಿನಿ ತೀರದಲ್ಲಿ ನೆಲೆಸಿರುವ ಮಹಾ ಶಕ್ತಿದೇವಿಯಾಗಿ ಪ್ರಸಿದ್ಧಿ ಪಡೆದಿದ್ದು, ಅನೇಕ ಪವಾಡಗಳು ಮತ್ತು ಮಹಿಮೆಗಳ ಮೂಲಕ ಭಕ್ತರ ಆರಾಧ್ಯ ದೈವವಾಗಿ ಕೀರ್ತಿಸಿಕೊಂಡಿದ್ದಾಳೆ ಎಂದು ಶ್ರೀ ಅಮಿತಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಜಾತ್ರೆಯ ಅಂಗವಾಗಿ ಮೇ 16ರಂದು ಮುಂಜಾನೆ 6 ಗಂಟೆಗೆ ದೇವಿಯ ಮೂಲ ಮೂರ್ತಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ ಹಾಗೂ 108 ಕುಂಭಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ನಂತರ ಸಕಲ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ಭಕ್ತರ ಸಮ್ಮುಖದಲ್ಲಿ ಸಾಗನೂರಿನ ಭೀಮಾ ನದಿಗೆ ತೆರಳಿ ಗಂಗಾಸ್ಥಾನ ಕುಂಭ ಮೆರವಣಿಗೆ ನೆರವೇರಲಿದೆ.
ಸಾಗನೂರಿನ ರಾಜಮಾರ್ಗ ಹಾಗೂ ಪ್ರಮುಖ ಸ್ಥಳಗಳಲ್ಲಿ ಭಕ್ತರ ಸ್ವಾಗತದೊಂದಿಗೆ ಬಾಜಾ-ಭಜಂತ್ರಿ, ಡೊಳ್ಳು ವಾದ್ಯಗಳ ಘೋಷದ ನಡುವೆ ಮೆರವಣಿಗೆ ಟಾಕಳಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನ 12 ಗಂಟೆಯೊಳಗೆ ತಲುಪಲಿದೆ. ಬಳಿಕ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀ ಚೌಡೇಶ್ವರೀ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.