ಕಲಬುರಗಿ, ಮೇ.೯: ಗುಲಬರ್ಗಾ ವಿದ್ಯುತ್ ಸಿಮೆಂಟ್ ಕಂಪೆನಿಗಾಗಿ ಭೂಸ್ವಾಧೀನ ಮಾಡಿರುವುದನ್ನು ವಿರೋಧಿಸಿ ಹಾಗೂ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಇದೇ ಮೇ ೧೨ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂತ್ರಸ್ತ ರೈತ ಶಂಕ್ರಪ್ಪ ಈರಣ್ಣ ಗೊಬ್ಬೂರು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಕಿರಣಗಿ, ಸೋಮನಾಥಹಳ್ಳಿ ಹಾಗೂ ಫಿರೋಜಾಬಾದ್ ಗ್ರಾಮಗಳ ರೈತರು ಭೂಸ್ವಾಧೀನದಿಂದ ಭೂನಿರಾಶ್ರಿತರಾಗಿದ್ದು, ಜೀವನೋಪಾಯ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
“ಪೂರ್ವಜರಿಂದ ಬಂದ ಜಮೀನುಗಳನ್ನೇ ನಂಬಿಕೊಂಡು ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ವೃದ್ಧರ ಪಾಲನೆ ಹಾಗೂ ಪಶುಸಂಗೋಪನೆ ಮಾಡುತ್ತಿದ್ದೇವೆ. ಜೊತೆಗೆ ಈ ಜಮೀನುಗಳ ಮೇಲೆ ಅವಲಂಬಿತವಾಗಿದ್ದ ಕೂಲಿ ಕಾರ್ಮಿಕರು ಮತ್ತು ಗ್ರಾಮಸ್ಥರೂ ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಅವರು ಹೇಳಿದರು.
ಸರ್ಕಾರವು ೨೦೧೩ರಲ್ಲಿ ಕೆಐಎಡಿಬಿ ಮೂಲಕ ಮೂರು ಗ್ರಾಮಗಳ ಒಟ್ಟು ೧೮೨೧ ಎಕರೆ ಜಮೀನನ್ನು ಕಂಪೆನಿಗಾಗಿ ಸ್ವಾಧೀನಪಡಿಸಿಕೊಂಡಿತ್ತು. ಆದರೆ ನಿಯಮಾನುಸಾರ ಕೈಗಾರಿಕೆ ಸ್ಥಾಪಿಸದೇ ಕಂಪೆನಿ ರೈತರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿದರು.
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಬೆಲೆ ನಿಗಧಿ ಪಾರದರ್ಶಕವಾಗಿರಲಿಲ್ಲ. ರೈತರನ್ನು ಸಭೆಗೆ ಕರೆಯದೇ ಏಕಪಕ್ಷೀಯವಾಗಿ ಭೂಬೆಲೆ ನಿಗಧಿಪಡಿಸಲಾಗಿದೆ ಎಂದು ದೂರಿದರು.
“೨೦೧೦ರಲ್ಲಿ ಪ್ರತಿ ಎಕರೆಗೆ ೩ ಲಕ್ಷ ರೂ. ಹಾಗೂ ೨೦೧೨ರಲ್ಲಿ ಮತ್ತೊಂದು ಲಕ್ಷ ರೂ. ಸೇರಿ ಒಟ್ಟು ೪ ಲಕ್ಷ ರೂ.ಗಳನ್ನು ಸ್ಟ್ಯಾಂಪ್ ಮೂಲಕ ನೀಡಲಾಗಿದೆ. ಇದಕ್ಕೆ ಅಧಿಕಾರ ಯಾರಿಂದ ದೊರಕಿತು ಎಂಬುದರ ಸ್ಪಷ್ಟನೆ ನೀಡಬೇಕು” ಎಂದು ಆಗ್ರಹಿಸಿದರು.
೨೦೧೩ರ ಅಕ್ಟೋಬರ್‌ನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತಿ ಎಕರೆಗೆ ೧೬ ಲಕ್ಷ ರೂ. ಭೂಬೆಲೆ ನಿಗದಿಯಾಗಿತ್ತು. ಬಳಿಕ ಕೆಐಎಡಿಬಿ ಅದನ್ನು ೧೨ ಲಕ್ಷ ರೂ.ಗಳಿಗೆ ಇಳಿಸಿ, ನಾಲ್ಕು ವರ್ಷಗಳ ನಂತರ ಹಣ ಪಾವತಿಸುವಾಗಲೂ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಕಂಪೆನಿ ಸಕಾಲದಲ್ಲಿ ನಿರ್ಮಾಣವಾಗದ ಕಾರಣ ಭೂಮಿಯನ್ನು ರೈತರಿಗೆ ಮರಳಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳು ನಿಗದಿಪಡಿಸಿದ್ದಂತೆ ಪ್ರತಿ ಎಕರೆಗೆ ೧೬ ಲಕ್ಷ ರೂ.ಗಳ ಪೂರ್ಣ ಪರಿಹಾರವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.
ಅದೇ ರೀತಿ, ೧೩ ವರ್ಷಗಳಿಂದ ಆದಾಯ ಕಳೆದುಕೊಂಡಿರುವ ರೈತ ಕುಟುಂಬಗಳಿಗೆ ಪ್ರತಿ ತಿಂಗಳು ೫೦ ಸಾವಿರ ರೂ.ಗಳಂತೆ ಪರಿಹಾರ ನೀಡಬೇಕು. ಭೂಮಿ ಕಳೆದುಕೊಂಡ ಪ್ರತಿ ಸರ್ವೆ ನಂಬರಿಗೆ ಜಾಬ್ ಕಾರ್ಡ್ ವಿತರಿಸಬೇಕು ಹಾಗೂ ಕಂಪೆನಿಯ ಟೆಂಡರ್‌ಗಳಲ್ಲಿ ಸ್ಥಳೀಯ ರೈತರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ ೧೨ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈರಣ್ಣ ಉಳ್ಳಾಗಡ್ಡಿ, ಪ್ರಭು ಭೈರಾಮಡಗಿ, ಭೀಮಾಶಂಕರ್ ಸರಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.