ಕಲಬುರ್ಗಿ, ಜೂ.೧೫- ಸರ್ಕಾರಿ ಅಭಿಯೋಜಕರಿಗೆ ಐದು ಸಾವಿರ ರೂ.ಗಳ ಲಂಚವನ್ನು ಕೊಡುತ್ತಿದ್ದ ಆರೋಪದ ಮೇಲೆ ಆಳಂದ್ ತಾಲ್ಲೂಕಿನ ಕೊತನಹಿಪ್ಪರಗಾದ ನಿವಾಸಿ ಹಾಗೂ ನಿವೃತ್ತ ನೌಕರ ಮತ್ತು ಹಾಲಿ ವಸ್ತಿ ಉಸ್ಮಾನಾಬಾದ್ ಜಿಲ್ಲೆಯ ಉಮ್ಮರ್ಗಾದ ಸಂಜೀವನ್ ತಂದೆ ದತ್ತಾಜಿ ಪಾಟೀಲ್ (೮೦) ಮತ್ತು ಆತನ ಪುತ್ರ ಸುರೇಶ್ ತಂದೆ ಸಂಜೀವನ್ ಪಾಟೀಲ್ (೪೪) ಅವರಿಗೆ ಲೋಕಾಯುಕ್ತರು ಬಂಧಿಸಿದ ಘಟನೆ ಸೋಮವಾರ ವರದಿಯಾಗಿದೆ.
ವಿಭಾಗದ ಹಿರಿಯ ಕಾನೂನು ಅಧಿಕಾರಿ ಪ್ರಾಣೇಶ್ ತಂದೆ ಸಿದ್ದಪ್ಪ ಭರತನೂರ್ ಅವರು ನೀಡಿದ ದೂರಿನ ಮೇಲೆ ಕರ್ನಾಟಕ ಲೋಕಾಯುಕ್ತ ಪೋಲಿಸ್ ಅಧೀಕ್ಷಕ ಸಿದ್ಧರಾಜು ಅವರ ನೇತೃತ್ವದಲ್ಲಿನ ತಂಡವು ಕಾರ್ಯಾಚರಣೆ ಕೈಗೊಂಡು ಆರೋಪಿಗಳಿಬ್ಬರನ್ನುತನಿಖಾಧಿಕಾರಿ ಪಿಐ ರಾಜಶೇಖರ್ ಬಡದೇಸಾರ್ ಅವರು ಬಂಧಿಸಿ ವಿಚಾರಣೆ ಕೈಗೊಂಡರು.
ಲೋಕಾಯುಕ್ತ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್ಪೆಕ್ಟರ್, ರಾಜಶೇಖರ ಬಡದೇಸಾರ.
ಆಳಂದ ಪೊಲೀಸ್ ಠಾಣೆಗೆ ಸಂಬAಧಿಸಿದ ಎಸ್‌ಸಿ, ಎಸ್‌ಟಿ ಪ್ರಕರಣದಲ್ಲಿ ೨ನೇ ಅಪರ ಜಿಲ್ಲಾ ಮತ್ತು ಸತ್ರ (ಎಸ್.ಸಿ/ಎಸ್.ಟಿ) ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣವನ್ನು ಸಾಗು ಹಾಕುವ ಮತ್ತು ಪ್ರಕರಣದಲ್ಲಿಯ ಆರೋಪಿತನಿಗೆ ಸಹಾಯ ಮಾಡುವ ಉದ್ದೇಶದಿಂದ ೫೦೦೦ರೂ.ಗಳನ್ನು ಸರ್ಕಾರಿ ಅಭಿಕಯೋಜಕರಿಗೆ ಆರೋಪಿತನ ಪರವಾಗಿ ಅಣ್ಣನಾದ ಸಂಜೀವನ್ ಪಾಟೀಲ್ ಹಾಗೂ ಸಂಜೀವನ್ ಈತನ ಮಗ ಸುರೇಶ್ ಪಾಟೀಲ್ ಅವರು ಒತ್ತಾಯ ಪೂರ್ವಕವಾಗಿ ಪಾಕೆಟ್‌ನಲ್ಲಿ ಇಟ್ಟು ಲಂಚ ಕೊಡಲು ಹೋದಾಗ ಸದರಿಯವರನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡರು.
ತನಿಖೆಯ ನಂತರ ಅವರನ್ನು ಆರೋಪಿಯನ್ನು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಐ ಅರುಣ್ ಕುಮಾರ್ ಮತ್ತು ರವಿ ಪವಾರ್ ಮುಂತಾದವರು ಉಪಸ್ಥಿತರಿದ್ದರು.