ಕಲಬುರ್ಗಿ, ಮೇ.೧೨- ಪತ್ರಿಕೋದ್ಯಮ ವಿಭಾಗದ ಕುರಿತು ನನಗೆ ಅತೀವ ಕಾಳಜಿ ಇದೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ಮಾರ್ಟ್ ಕ್ಲಾಸ್ ಮಾಡಲು ಬೇಡಿಕೆ ಇತ್ತು ಅದನ್ನು ಈಡೇರಿಸಿದ್ದೇನೆ. ವಿಭಾಗದ ವಿದ್ಯಾರ್ಥಿಗಳು ಇಲ್ಲಿನ ಸೌಲಭ್ಯ ಪಡೆದುಕೊಂಡು ಉನ್ನತ ಗುರಿಯತ್ತ ಸಾಗಬೇಕು ಎಂದು ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ. ಭೈರಪ್ಪ ಅವರು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಪತ್ರಿಕಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪಾತ್ರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಉಳಿಸಲು ಪ್ರಯತ್ನಿಸುವೆ. ವಿದ್ಯಾರ್ಥಿಗಳು ಭವಿಷ್ಯದ ನಾಯಕರು. ಪತ್ರಿಕೋದ್ಯಮ ವಿಭಾಗದ ಬಗ್ಗೆ ನನಗೆ ಅತೀವ ಕಾಳಜಿ ಇದ್ದು ಈ ವಿಭಾಗದಲ್ಲಿ ಸ್ಮಾರ್ಟ್ ಕ್ಲಾಸ್ ಮಾಡಲು ಬೇಡಿಕೆ ಇತ್ತು ಅದನ್ನು ಈಡೇರಿಸಿದ್ದೇನೆ. ಓದಿನ ಜೊತೆಗೆ ಬರವಣಿಗೆ ಶೈಲಿ ಬಲಪಡಿಸಿಕೊಳ್ಳಬೇಕು ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಉಡಿಕೇರಿ ಅವರು ಮಾತನಾಡಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಬರವಣಿಗೆಯ ಜೊತೆಗೆ ಓದಿಗೆ ಹೆಚ್ಚು ಮಹತ್ವ ಕೊಡಬೇಕು ಎಂದರು. ಪತ್ರಕರ್ತರಿಗಗೂ ಕೂಡ ಹಲವು ಜವಾಬ್ದಾರಿಗಳಿವೆ. ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಪತ್ರಕರ್ತರು ಪ್ರಾಮಾಣಿಕ ಮತ್ತು ವಸ್ತುನಿಷ್ಟ ಸುದ್ದಿಗಳಿಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದರು.
ಕೆಬಿಎನ್ ವಿಶ್ವವಿದ್ಯಾಲಯದ ಮಾಧ್ಯಮ ಸಂಯೋಜಕಿ ಡಾ. ನಮ್ರತಾ ರಾವುತ್ ಅವರು ವಿಶೇಷ ಉಪನ್ಯಾಸ ನೀಡಿದರು. ಸಿಂಡಿಕೇಟ್ ಸದಸ್ಯ ಉದಯಕಾಂತ ಪಾಟೀಲ್ ಅವರು ಮಾತನಾಡಿದರು. ಸಂಯೋಜಕ ಡಾ. ಸುರೇಶ ಜಂಗೆ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ. ಅಶೋಕ ಶರಣಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರಾಜಕುಮಾರ್ ದಣ್ಣೂರು ಅವರು ಸ್ವಾಗತಿಸಿದರು. ಡಾ. ತೀರ್ಥಕುಮಾರ ಬೆಳಕೋಟ ಅವರು ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.