ಬೀದರ್, ಜೂ.೨೦- ಅಂತರರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಕ್ರೀಡಾಪಟು ಹಾಗೂ ಕರ್ನಾಟಕ ರಾಜ್ಯ ಸ್ಪೋರ್ಟ್ ಕಿಂಗ್‌ನ ರಾಜ್ಯಾಧ್ಯಕ್ಷ ಪರ್ವೇಜ್ ಖಾನ್ ಅವರ ಜೀವನ ಮತ್ತು ಸಾಧನೆಯನ್ನು ಆಧರಿಸಿದ “ಮೈ ಹೂನ್ ಪರ್ವೇಜ್ ಖಾನ್” ಅಲ್ಬಮ್ ಹಾಡನ್ನು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಲಾಯಿತು.
ತಂಡದ ವ್ಯವಸ್ಥಾಪಕ ನಿರ್ದೇಶಕ ಡಾ. ಮೊಹ್ಮದ್ ಇಮ್ರಾನ್ ಸಯೀದ್ ಈ ಸಂದರ್ಭದಲ್ಲಿ ಮಾತನಾಡಿ, ಈ ಹಾಡಿನಲ್ಲಿ ಪರ್ವೇಜ್ ಖಾನ್ ಅವರ ವ್ಯಕ್ತಿತ್ವ ಹಾಗೂ ಸಾಧನೆಗಳನ್ನು ಬಿಂಬಿಸುವುದರ ಜೊತೆಗೆ ಬೀದರ ಜಿಲ್ಲೆಯ ಐತಿಹಾಸಿಕ ತಾಣಗಳನ್ನು ಚಿತ್ರಿಸಲಾಗಿದೆ. ಯುವಜನತೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಹಾಡು ನಿರ್ಮಾಣವಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ಇದು ಸ್ಪೂರ್ತಿದಾಯಕವಾಗಲಿದೆ ಎಂದು ಹೇಳಿದರು.
ಮಹಾರಾಷ್ಟ್ರ ಮೂಲದ ರೂಬಿನ್ ಮ್ಯೂಸಿಕ್ ಕಂಪನಿ ಈ ಹಾಡನ್ನು ನಿರ್ಮಿಸಿದ್ದು, ಜಗತ್ತಿನ ೨೫೦ಕ್ಕೂ ಹೆಚ್ಚು ಆಡಿಯೊ ಪ್ಲಾಟ್‌ಫಾರ್ಮ್ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಜೊತೆಗೆ ೪೫ ಯೂಟ್ಯೂಬ್ ಮ್ಯೂಸಿಕ್ ಚಾನೆಲ್‌ಗಳು, ಗಾನಾ ಡಾಟ್ ಕಾಮ್ ಹಾಗೂ ಸಾರೆಗಮ ಸೇರಿದಂತೆ ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಹಾಡು ಲಭ್ಯವಾಗಲಿದೆ. ಹೈದರಾಬಾದ್‌ನ ಎ.ಆರ್. ಇಂಡಸ್ಟ್ರೀಸ್ ಎಂಟರ್‌ಟೈನ್‌ಮೆAಟ್ ಸಂಸ್ಥೆಯ ಮೂಲಕ ಯೂಟ್ಯೂಬ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹಾಡು ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದರು. ಪರ್ವೇಜ್ ಖಾನ್ ಅವರ ಮುಂದಿನ ಅಲ್ಬಮ್ ಹಾಡು ಜುಲೈ ೫ರಂದು ಬಿಡುಗಡೆಯಾಗಲಿದ್ದು, ಅದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ ಎಂದು ಡಾ. ಇಮ್ರಾನ್ ಸಯೀದ್ ಅವರು ಹೇಳಿದರು.
ಹಾಡಿನ ನಾಯಕ ಪರ್ವೇಜ್ ಖಾನ್ ಅವರು ಮಾತನಾಡಿ, ಇಂದು ಯುವಜನರು ಮೊಬೈಲ್ ಗೀಳಿಗೆ ಬಲಿಯಾಗಿ ದೈಹಿಕ ಸಾಮರ್ಥ್ಯ ಕುಂದಿಸಿಕೊಳ್ಳುತ್ತಿರುವರು. ನಿತ್ಯ ದೈಹಿಕ ಚಟುವಟಿಕೆಗಳು, ಜಿಮ್, ವ್ಯಾಯಾಮ, ವಾಯುವಿಹಾರ ಇತ್ಯಾದಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಸೌಂದರ್ಯ ಹಾಗೂ ದೈಹಿಕ ಬಲ ಹೆಚ್ಚಿಸಿಕೊಳ್ಳಬೇಕು. ನನ್ನ ಅಲ್ಬಮ್ ಹಾಡನ್ನು ಎಲ್ಲರು ಫಾಲೊ ಮಾಡಬೇಕೆಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಯಕಿ ಮುಸ್ಕಾನ್ ಮುಜಾವರ್, ಸಂಗೀತ ನಿರ್ದೇಶಕ ರೋಬಿನ್ ಮುಜಾವರ್, ನಿರ್ಮಾಪಕ ಸತೀಶ್ ಶರ್ಮಾ ನಂದಿ, ಸಾಮಾಜಿಕ ಜಾಲತಾಣ ಪ್ರಭಾವಿ ರಘುಪ್ರಿಯಾ, ಕಿಕ್ ಬಾಕ್ಸಿಂಗ್ ಕೋಚ್ ಸುವಿತ್ ಮೋರೆ, ಕರಾಟೆ ಕೋಚ್ ಸೂರ್ಯಕಾಂತ್ ಮೋರೆ, ನಟ ಅಯಾನ್ ಖಾನ್, ಸಮಾಜ ಸೇವಕ ನವಾಜ್ ಖಾನ್, ಕ್ರಿಯೇಟಿವ್ ಸದಸ್ಯೆ ಪೂಜಾ ಪಿಟ್ಲೆ ಮುಂತಾದವರು ಉಪಸ್ಥಿತರಿದ್ದರು.