ಅಫಜಲಪೂರ: ರಾಜ್ಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಹೆಸರು ಕೇಳಿಬರುತ್ತಿರುವ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜೆ.ಎಂ. ಕೊರಬು ವಿರುದ್ಧ ಇದೀಗ ಅವರ ಸ್ವಕುಟುಂಬದಿಂದಲೇ ವಿರೋಧದ ಧ್ವನಿ ಕೇಳಿಬಂದಿದೆ. ಕೊರಬು ಅವರ ಸಹೋದರಳಿಯ ಸಿದ್ದಾರ್ಥ ಅವರು ವಿಡಿಯೋ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಡಿಯೋ ತಾಲೂಕಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸಿದ್ದಾರ್ಥ ಅವರು, “ಜೆ.ಎಂ. ಕೊರಬು ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಕೆಲವರು ಒತ್ತಾಯಿಸುತ್ತಿರುವುದು ಸರಿಯಲ್ಲ. ಅವರ ರಾಜಕೀಯ ಮತ್ತು ಸಾಮಾಜಿಕ ಹಿನ್ನೆಲೆ ಬಗ್ಗೆ ತಾಲೂಕಿನ ಜನರಿಗೆ ಚೆನ್ನಾಗಿ ಗೊತ್ತಿದೆ. ವಿಶೇಷವಾಗಿ ಮಾಶಾಳ ಗ್ರಾಮದಲ್ಲಿ ಅವರ ಬಗ್ಗೆ ವಿಚಾರಿಸಿದರೆ ನಿಜಾಂಶ ತಿಳಿಯುತ್ತದೆ” ಎಂದು ಆರೋಪಿಸಿದ್ದಾರೆ.
ಇನ್ನೂ, “ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷರಾಗಿರುವ ಅವರು ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಬದಲು ಕೆಲ ಜಾತಿಗಳ ವಿರುದ್ಧವೇ ಮಾತನಾಡುತ್ತ ಬಂದಿದ್ದಾರೆ. ಇಂತಹ ವ್ಯಕ್ತಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವುದು ಸಮಂಜಸವಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆ.ಎಂ. ಕೊರಬು ಅವರು ಸ್ವಾರ್ಥ ರಾಜಕಾರಣ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಕುರುಬ ಸಮಾಜದ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯವಾಗಿದೆ ಎಂದು ಆರೋಪಿಸಿದ ಸಿದ್ದಾರ್ಥ, ಯಾವುದೇ ಕಾರಣಕ್ಕೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕೊರಬು ಅವರಿಗೆ ಪರಿಷತ್ ಸ್ಥಾನ ನೀಡಬಾರದು ಎಂದು ಆಗ್ರಹಿಸಿದ್ದಾರೆ.