ತೊನಸನಹಳ್ಳಿಯಲ್ಲಿ ಭವ್ಯ ಜಾತ್ರಾ ಮಹೋತ್ಸವ: ಮಾರ್ಚ್ 27ರಿಂದ 30ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳು
ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಸುಕ್ಷೇತ್ರ ತೊನಸನಹಳ್ಳಿ ಗ್ರಾಮದಲ್ಲಿ ಸದ್ಗುರು ಶ್ರೀ ಮಲ್ಲಣಪ್ಪ ಮಹಾರಾಜರು, ಶ್ರೀ ಅಲ್ಲಮಪ್ರಭು ಹಾಗೂ ಶ್ರೀ ಸುಲ್ತಾನ್ ಅಹ್ಮದಶಾಹವಲಿ ಅವರ ಜಾತ್ರಾ ಮಹೋತ್ಸವವು ಮಾರ್ಚ್ 27ರಿಂದ 30ರವರೆಗೆ ಭವ್ಯವಾಗಿ ನಡೆಯಲಿದೆ.
ಈ ನಾಲ್ಕು ದಿನಗಳ ಜಾತ್ರೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಸಮೃದ್ಧವಾಗಿ ಆಯೋಜಿಸಲಾಗಿದೆ.
ಜಾತ್ರೆಯ ಪ್ರಾರಂಭವಾಗಿ ಮಾರ್ಚ್ 27ರಂದು ರಾತ್ರಿ 10:30 ಗಂಟೆಗೆ ಶ್ರೀ ಗಂಧೋತ್ಸವ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 28ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದ ಪೂಜ್ಯಶ್ರೀ ಡಾ. ಸೌರಭ ಸ್ವಾಮಿಗಳ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಇದೇ ದಿನ ಸಂಜೆ 6:30ಕ್ಕೆ ಭವ್ಯ ರಥೋತ್ಸವ ನಡೆಯಲಿದ್ದು, ನಂತರ ಸಂಜೆ 7:30ಕ್ಕೆ ಧರ್ಮಸಭೆ ಜರುಗಲಿದೆ. ರಾತ್ರಿ 10 ಗಂಟೆಗೆ ಶ್ರೀ ಚನ್ನವೀರ ಬೆಳಗುಂಪ್ಪಾ ಅರ್ಪಿಸುವ ಕಲಾವಿದ ಮೆಲೋಡೀಸ್ ಆರ್ಕೆಸ್ಟ್ರಾ (ಕಲಬುರಗಿ ತಂಡ) ವತಿಯಿಂದ ರಸಮಂಜರಿ ಕಾರ್ಯಕ್ರಮವೂ ನಡೆಯಲಿದೆ.
ಮಾರ್ಚ್ 29ರಂದು (ರವಿವಾರ) ಕುಸ್ತಿ ಪಂದ್ಯಗಳು ಜರುಗಲಿದ್ದು, ಭಕ್ತರು ಹಾಗೂ ಸಾರ್ವಜನಿಕರಿಗೆ ವಿಶೇಷ ಆಕರ್ಷಣೆಯಾಗಲಿದೆ.
ಜಾತ್ರೆಯ ಸಮಾರೋಪವಾಗಿ ಮಾರ್ಚ್ 30ರಂದು ದೇವರನ್ನು ಮಹಾಮನೆಗೆ ಬರಮಾಡಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ.
ಈ ಭವ್ಯ ಜಾತ್ರಾ ಮಹೋತ್ಸವವು ಧರ್ಮರತ್ನ ಪೂಜ್ಯಶ್ರೀ ಡಾ. ಮಲ್ಲಣಪ್ಪ ಮಹಾಸ್ವಾಮಿಗಳವರ ಘನ ನೇತೃತ್ವದಲ್ಲಿ, ಶ್ರೀ ಅಲ್ಲಮಪ್ರಭು ಸಂಸ್ಥಾನ ಮಠದ ಆಶ್ರಯದಲ್ಲಿ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಎಸ್‌ಎಸ್‌ಡಬ್ಲ್ಯೂ ನ್ಯೂಸ್ ಕನ್ನಡ ಸುದ್ದಿ ವಾಹಿನಿ ತಿಳಿಸಿದೆ.