ದಲಿತ ಸಿಎಂ ಕೂಗು, ಮಲ್ಲಿಕಾರ್ಜುನ ಖರ್ಗೆ ಪರ ಜೆ ಎಂ ಕೊರಬು ಬ್ಯಾಟಿಂಗ್ : ಕಾಂಗ್ರೆಸ್ ಒಳ ರಾಜಕೀಯದಲ್ಲಿ ಹೊಸ ಚರ್ಚೆ.

 

ಅಫಜಲಪೂರ: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ಮರುಜೋರಾಗುತ್ತಿರುವ ಬೆನ್ನಲ್ಲೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಮಾಡಬೇಕೆಂಬ ಜೆ.ಎಂ. ಕೊರಬು ಹೇಳಿಕೆ ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜೆ.ಎಂ. ಕೊರಬು, ಕಲಂ 371(J) ಜಾರಿಗೆ ತಂದು ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗೆ ದಿಕ್ಕು ತೋರಿದವರು ಖರ್ಗೆ ಎಂದು ಶ್ಲಾಘಿಸಿದರು. ಅವರ ಆಡಳಿತ ಅನುಭವ ಮತ್ತು ರಾಷ್ಟ್ರೀಯ ಮಟ್ಟದ ನಾಯಕತ್ವ ರಾಜ್ಯಕ್ಕೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಆದರೆ, ಈ ಹೇಳಿಕೆಯ ರಾಜಕೀಯ ಅರ್ಥಗಳು ಇದೀಗ ದೊಡ್ಡ ಚರ್ಚೆಗೆ ಗ್ರಾಸವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದುವರಿಯುತ್ತಿರುವಾಗಲೇ, ಅವರದೇ ಸಮುದಾಯದ ನಾಯಕನಿಂದ ಖರ್ಗೆ ಪರ ಬಹಿರಂಗ ಬೆಂಬಲ ವ್ಯಕ್ತವಾಗಿರುವುದು ಪಕ್ಷದ ಒಳಗಡೆ ಭಿನ್ನಮತಗಳಿರುವುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.ರಾಜಕೀಯ ವಲಯದಲ್ಲಿ ಈ ಹೇಳಿಕೆಯನ್ನು ವಿಭಿನ್ನವಾಗಿ ವ್ಯಾಖ್ಯಾನಿಸಲಾಗುತ್ತಿದೆ. ಕೆಲವರು ಇದನ್ನು ‘ಹೈಕಮಾಂಡ್‌’ ಗೆ ಸಂದೇಶ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ರಾಜ್ಯ ನಾಯಕತ್ವದ ಮೇಲೆ ಒತ್ತಡ ತರುವ ತಂತ್ರ ಎಂದು ಅಭಿಪ್ರಾಯಪಡುತ್ತಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್‌ನ ಕೆಲವು ವಲಯಗಳು ಇದನ್ನು ವೈಯಕ್ತಿಕ ಅಭಿಪ್ರಾಯವೆಂದು ತಳ್ಳಿಹಾಕಲು ಪ್ರಯತ್ನಿಸುತ್ತಿವೆ.ಇದಲ್ಲದೆ, ಸಿಎಂ ಬದಲಾವಣೆ ಕುರಿತ ಚರ್ಚೆಗಳು ಸದ್ದು ಮಾಡುತ್ತಿರುವ ಈ ಸಂದರ್ಭದಲ್ಲೇ ಕೊರಬು ಹೇಳಿಕೆ ಹೊರಬಂದಿರುವುದು ರಾಜಕೀಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಈ ವಿಚಾರ ಕಾಂಗ್ರೆಸ್ ಒಳರಾಜಕೀಯದಲ್ಲಿ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Share This Article
Leave a Comment