ಇಂಧನ ದರ ಏರಿಕೆ ಖಂಡಿಸಿ ಎಸ್‌ಯುಸಿಐ(ಸಿ) ಪ್ರತಿಭಟನೆ

 

ಕಲಬುರಗಿ: ಕೇಂದ್ರ ಸರ್ಕಾರ ಕಳೆದ ಕೆಲವು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪದೇ ಪದೇ ಏರಿಕೆ ಮಾಡಿರುವುದನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) [ಎಸ್‌ಯುಸಿಐ(ಸಿ)] ಕಲಬುರಗಿ ಜಿಲ್ಲಾ ಸಮಿತಿಯು ನಗರದ ಎಸ್.ವಿ.ಪಿ. ವೃತ್ತದ ಬಳಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಇತರ ಇಂಧನಗಳ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಪಶ್ಚಿಮ ಏಷ್ಯಾದ ಯುದ್ಧದಿಂದ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ ಎಂಬ ಕಾರಣವನ್ನು ಕೇಂದ್ರ ಸರ್ಕಾರ ನೀಡುತ್ತಿರುವುದನ್ನು ಪ್ರಶ್ನಿಸಿದ ಪ್ರತಿಭಟನಾಕಾರರು, ಯುದ್ಧ ಆರಂಭವಾದ ಬಳಿಕವೂ ಚುನಾವಣಾ ಫಲಿತಾಂಶ ಬರುವವರೆಗೆ ದರ ಏರಿಕೆಯನ್ನು ತಡೆಹಿಡಿದಿದ್ದು ಏಕೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಇಂಧನ ದರಗಳ ಜೊತೆಗೆ ಅಡುಗೆ ಅನಿಲ ಹಾಗೂ ಸಿಎನ್‌ಜಿ ದರಗಳೂ ಹೆಚ್ಚಾಗಿರುವುದರಿಂದ ಸಾಮಾನ್ಯ ಜನರು, ಆಟೋ ಚಾಲಕರು, ಹೋಟೆಲ್ ಉದ್ಯಮಿಗಳು ಸೇರಿದಂತೆ ವಿವಿಧ ವರ್ಗಗಳ ಜನರಿಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಿದೆ ಎಂದು ಅವರು ಆರೋಪಿಸಿದರು.

ಕೋವಿಡ್ ಅವಧಿಯಲ್ಲಿ ಹಾಗೂ ನಂತರ ಕಚ್ಚಾತೈಲದ ಜಾಗತಿಕ ಬೆಲೆ ಕುಸಿದಾಗ ಅಥವಾ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸಿದ ಸಂದರ್ಭಗಳಲ್ಲಿ ಅದರ ಲಾಭವನ್ನು ಜನರಿಗೆ ನೀಡದೇ, ಬದಲಾಗಿ ತೆರಿಗೆ ಹೆಚ್ಚಿಸಿ ಆದಾಯ ಸಂಗ್ರಹಿಸಲಾಗಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆಗಳು ಇಂಧನ ದರ ಏರಿಕೆಗೆ ಪ್ರಮುಖ ಕಾರಣವಾಗಿವೆ ಎಂದು ಅವರು ಹೇಳಿದರು.

ಇಂಧನ ಬೆಲೆ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಾಗಿ, ಅಗತ್ಯ ವಸ್ತುಗಳ ಬೆಲೆಗಳ ಮೇಲೂ ಪರಿಣಾಮ ಬೀರಿದ್ದು, ಒಟ್ಟಾರೆ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ. ಜನರ ಆದಾಯ ಕುಸಿಯುತ್ತಿರುವ ಮತ್ತು ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಧನ ಮೇಲಿನ ತೆರಿಗೆಗಳನ್ನು ಕಡಿತಗೊಳಿಸಬೇಕು, ಪರ್ಯಾಯ ತೈಲ ಮೂಲಗಳನ್ನು ಹುಡುಕಬೇಕು ಹಾಗೂ ಜಾಗತಿಕ ಮಟ್ಟದಲ್ಲಿ ಯುದ್ಧ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಆರ್.ಕೆ. ವೀರಭದ್ರಪ್ಪ, ಜಿಲ್ಲಾ ಸಮಿತಿ ಸದಸ್ಯೆ ವಿ. ನಾಗಮ್ಮಾಳ್ ಸೇರಿದಂತೆ ಹಲವರು ಮಾತನಾಡಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಮಿತಿ ಸೆಕ್ರೆಟೇರಿಯೇಟ್ ಸದಸ್ಯ ಎಂ. ಶಶಿಧರ್, ಜಿಲ್ಲಾ ಸಮಿತಿ ಸದಸ್ಯರಾದ ರಾಮಣ್ಣ ಇಬ್ರಾಹಿಂಪುರ, ಗಣಪತರಾವ ಮಾನೆ, ಎಸ್.ಎಂ. ಶರ್ಮಾ, ಜಗನ್ನಾಥ ಎಸ್.ಎಚ್., ಮಹೇಶ ಎಸ್.ಬಿ., ರಾಘವೇಂದ್ರ ಎಂ.ಜಿ., ರಾಧಾ, ವಿಶಾಲಾಕ್ಷಿ ಪಾಟೀಲ್, ಮಹಾದೇವಿ, ಈಶ್ವರ, ಗೌರಮ್ಮ, ರಮೇಶ ದೇವಕರ್, ದೇವರಾಜ, ಭೀಮು ಆಂದೋಲಾ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಭಾಗವಹಿಸಿದ್ದರು.

Share This Article
Leave a Comment