ಗಾಣಗಾಪೂರದಲ್ಲಿ ಸರಣಿ ಅಪಘಾತ: ಏಳು ವಾಹನಗಳಿಗೆ ಡಿಕ್ಕಿ, ಭಕ್ತರು ಅಪಾಯದಿಂದ ಪಾರು

 

ದೇವಲ ಗಾಣಗಾಪೂರ, ಮೇ 31: ಅಫಜಲಪುರ ತಾಲ್ಲೂಕಿನ ಪ್ರಸಿದ್ಧ ದತ್ತಕ್ಷೇತ್ರವಾದ ದೇವಲಗಾಣಗಾಪುರದಲ್ಲಿ ಭಾನುವಾರ ಸಂಭವಿಸಿದ ಸರಣಿ ರಸ್ತೆ ಅಪಘಾತದಲ್ಲಿ ಏಳು ವಾಹನಗಳು ಜಖಂಗೊಂಡಿದ್ದು, ಹಲವು ಭಕ್ತರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಣಗಾಪೂರ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಗಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರ ನೋಂದಣಿಯ (MH 12 ZE 3420) ಗೂಡ್ಸ್ ಪಿಕಪ್ ವಾಹನವು ನಿಯಂತ್ರಣ ತಪ್ಪಿ ಸಾಲಾಗಿ ನಿಂತಿದ್ದ ಏಳು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

 

ಅಪಘಾತದ ತೀವ್ರತೆಗೆ ಕೆಲವು ಕಾರುಗಳ ಏರ್‌ಬ್ಯಾಗ್‌ಗಳು ತೆರೆದ ಪರಿಣಾಮ ಭಾರೀ ಅನಾಹುತ ತಪ್ಪಿದೆ. ಸಾತಾರಾ ಜಿಲ್ಲೆಯ ಭಕ್ತರು ಹಾಗೂ ಮಕ್ಕಳು ಸೇರಿದಂತೆ ಹಲವರು ವಾಹನಗಳಲ್ಲಿದ್ದು, ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 

ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನಗಳ ಉದ್ದನೆಯ ಸಾಲು ನಿರ್ಮಾಣವಾಗಿತ್ತು. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೆ ಕಾರಣವಾದ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಈ ಘಟನೆ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸುರಕ್ಷತೆ ಹಾಗೂ ಟ್ರಾಫಿಕ್ ನಿರ್ವಹಣೆ ಕುರಿತು ಸ್ಥಳೀಯರು ಮತ್ತು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದರೂ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಬಂಧಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

 

ಗಾಣಗಾಪೂರ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಅಪಘಾತಗಳ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆ, ಸುಗಮ ಸಂಚಾರ ವ್ಯವಸ್ಥೆ ಹಾಗೂ ಭಕ್ತರ ಸುರಕ್ಷತೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share This Article
Leave a Comment