ಎಸ್‌ಐಆರ್‌ನಿಂದ ಮತದಾರರ ಪಟ್ಟಿ ಶುದ್ಧೀಕರಣ: ಸೂರ್ಯಕಾಂತ್ ನಾಗಮಾರಪಳ್ಳಿ

 

ಬೀದರ್, ಜೂ.೨೦- ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಹಳ ಮಹತ್ವದ ಅಭಿಯಾನವಾಗಿದೆ. ಇದು ಮತದಾರರ ಪಟ್ಟಿ ಶುದ್ಧೀಕರಣ ಮಾಡುವ ದೊಡ್ಡ ಕೆಲಸವಾಗಿದೆ. ಹೀಗಾಗಿ ಯಾರೂ ಸಹ ಇದನ್ನು ಲಘುವಾಗಿ ಪರಿಗಣಿಸಬಾರದು ಎಂದು ಜೆಡಿಎಸ್ ಮುಖಂಡ, ನಾರಂಹಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಹೇಳಿದರು.

ನಗರದ ಪಟ್ನೆ ಕಲ್ಯಾಣ ಮಂಟಪದಲ್ಲಿ ಶನಿವಾರ ಜೆಡಿಎಸ್ ಹಮ್ಮಿಕೊಂಡಿದ್ದ ಉತ್ತರ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಎಸ್‌ಐಆರ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯು ನಮ್ಮ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಇನ್ನಷ್ಟು ಶಕ್ತಿ ತುಂಬುವ ಅಭಿಯಾನವಾಗಿದೆ. ಮತದಾರರ ಪಟ್ಟಿ ಶುದ್ಧವಿದ್ದರೆ ಮಾತ್ರ ಪ್ರಜಾತಂತ್ರ ವ್ಯವಸ್ಥೆ ಸರಿಯಾಗಿರಲು ಸಾಧ್ಯ ಎಂದರು.

ಮತದಾರರ ಪಟ್ಟಿಯಲ್ಲಿ ದೋಷ, ನಕಲಿ ಹೆಸರು, ಡಬಲ್ ನೋಂದಣಿಗಳು ಇದ್ದರೆ ಚುನಾವಣೆ ಪಾರದರ್ಶಕವಾಗಿ ನಡೆಯಲು ಸಾಧ್ಯವೇ ಇಲ್ಲ. ಅನರ್ಹರು ಮತ ಚಲಾವಣೆ ಮಾಡಿದರೆ ಅರ್ಹರ ಹಕ್ಕು ದಮನವಾಗುತ್ತವೆ. ಹೀಗಾಗದಂತೆ ನೋಡಿಕೊಳ್ಳಲು ಎಸ್‌ಐಆರ್ ಪ್ರಕ್ರಿಯೆ ಅತ್ಯಂತ ಅಗತ್ಯವಿದೆ. ಮತದಾರರ ಪಟ್ಟಿ ಶುದ್ಧವಾಗಿದ್ದರೆ ಮಾತ್ರ ಸರಿಯಾದ ಜನಪ್ರತಿನಿಧಿಗಳು ಆಯ್ಕೆಯಾಗುತ್ತಾರೆ ಎಂಬುದು ಎಲ್ಲರೂ ಅರಿಯಬೇಕು ಎಂದು ಅವರು ಹೇಳಿದರು.

ಪ್ರತಿಯೊಂದು ಮತ ಬಹಳ ಅಮೂಲ್ಯವಿದೆ. ಹೀಗಾಗಿ ಅನರ್ಹ ಮತದಾರರು ಮತ ಪಟ್ಟಿಯಲ್ಲಿ ಉಳಿದರೆ ದೇಶದ ಪ್ರಜಾತಂತ್ರ ವ್ಯವಸ್ಥೆಗೆ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟ ಶ್ರೇಷ್ಠ ಸಂವಿಧಾನಕ್ಕೆ ದ್ರೋಹ ಬಗೆದಂತಾಗಲಿದೆ. ಅನರ್ಹರಿಗೆ ಮತ ಪಟ್ಟಿಯಿಂದ ಹೊರಗಿಡಲು ಎಸ್‌ಐಆರ್ ಪರಿಣಾಮಕಾರಿ ಸಾಧನವಾಗಿದೆ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಎಸ್ ಐಆರ್ ಬಹಳ ಯಶಸ್ವಿಯಾಗಿ ನಡೆದಿದೆ. ಇಲ್ಲಿ ಸಹ ಯಶಸ್ವಿಯಾಗಿ ನಡೆಯುವಲ್ಲಿ ಪ್ರತಿ ಬೂತ್ ಮಟ್ಟದ ಕಾರ್ಯಕರ್ತರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.

ಶುದ್ಧ ಮತಪಟ್ಟಿ ಎಂದರೆ ಶುದ್ಧ ಚುನಾವಣೆ, ಶುದ್ಧ ಚುನಾವಣೆ ಎಂದರೆ ಬಲಿಷ್ಠ ಪ್ರಜಾಪ್ರಭುತ್ವ. ಮತಪಟ್ಟಿ ಶುದ್ಧವಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ಜನರ ವಿಶ್ವಾಸ ಮತ್ತಷ್ಟು ಹೆಚ್ಚಾಗಲಿದೆ. ತಂತ್ರಜ್ಞಾನ ಬಳಸಿಕೊಂಡು ಮತದಾರರ ನಿಖರ ಪರಿಶೀಲನೆ ನಡೆಸಲಾಗುತ್ತಿದೆ. ಮನೆ ಮನೆಗೆ ಭೇಟಿ, ದಾಖಲೆಗಳ ಪರಿಶೀಲನೆ, ಆನ್‌ಲೈನ್ ತಿದ್ದುಪಡಿ ವ್ಯವಸ್ಥೆ, ಇವೆಲ್ಲವೂ ಪಾರದರ್ಶಕತೆ ತೋರಿಸುತ್ತದೆ ಎಂದು ಅವರು ಹೇಳಿದರು.

ಎಸ್‌ಐಆರ್ ಬಗ್ಗೆ ಕೆಲವರು ವಿನಾಕಾರಣ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಮತ ಹಕ್ಕು ಕಸಿಯಲಾಗುತ್ತಿದೆ ಎಂದು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಎಸ್ ಐಆರ್ ಯಾವುದೇ ಜಾತಿ, ವರ್ಗದವರ ವಿರೋಧವಲ್ಲ. ಇದು ದೇಶದ ಬೆನ್ನೆಲುಬಾದ ಪ್ರಜಾತಂತ್ರಕ್ಕೆ ಶಕ್ತಿ ತುಂಬುವ ಪ್ರಕ್ರಿಯೆಯಾಗಿದೆ. ಇದಕ್ಕೆ ಅನಗತ್ಯವಾಗಿ ವಿರೋಧಿಸಿದರೆ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ವಿರೋಧಿಸಿದಂತಾಗಲಿದೆ ಎಂದು ಅವರು ಎಚ್ಚರಿಸಿದರು

ಉತ್ತರ ಕ್ಷೇತ್ರದ ಮತ ಪಟ್ಟಿಯಲ್ಲಿ ೨೦ ಸಾವಿರಕ್ಕೂ ಅನರ್ಹ ಮತದಾರರಿರುವ ಶಂಕೆಯಿದೆ. ಹೀಗಾಗಿ ಎಸ್ ಐಆರ್ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಉತ್ತರ ಕ್ಷೇತ್ರ ತೆಲಂಗಾಣದ ಗಡಿಯಲ್ಲಿದೆ. ಜಿಲ್ಲಾ ಕೇಂದ್ರ ಬೀದರ್ ಸಿಟಿ ಒಳಗೊಂಡ ಕ್ಷೇತ್ರವೂ ಇದಾಗಿದೆ. ಕ್ಷೇತ್ರದಲ್ಲಿ ಡಬಲ್ ನೋಂದಣಿಯುಳ್ಳ ಮತದಾರರು, ಬೇರೆ, ಬೇರೆ ಕಡೆ ಇರುವವರ ಮತದಾರರು ಇಲ್ಲಿನ ಮತ ಪಟ್ಟಿಯಲ್ಲಿ ಹೆಸರು ಹೊಂದಿದ್ದು, ಇಂಥ ೨೦ ಸಾವಿರಕ್ಕೂ ಹೆಚ್ಚು ಅನಧಿಕೃತ ಮತದಾರರು ಈ ಕ್ಷೇತ್ರದ ಮತ ಪಟ್ಟಿಯಲ್ಲಿ ಸೇರಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಎಲ್ಲ ಬೂತ್ ಮಟ್ಟದ ಕಾರ್ಯಕರ್ತರು ಬಹಳ ಗಂಭೀರವಾಗಬೇಕಿದೆ. ಅಧಿಕಾರಿಗಳು ಸಹ ಹೆಚ್ಚು ನಿಗಾ ವಹಿಸಬೇಕು ಎಂದು ಅವರು ಹೇಳಿದರು.

ಯಾವುದೇ ಕಾರಣಕ್ಕೂ ಯಾವುದೇ ಬೂತ್‌ನಲ್ಲಿ ಒಬ್ಬರೂ ಅನಧಿಕೃತ ಮತದಾರರು ಮತ ಪಟ್ಟಿಯಲ್ಲಿ ಇರಬಾರದು. ಯಾವ ಕಾರಣಕ್ಕೂ ಅರ್ಹ ಮತದಾರರ ಹೆಸರು ಮತಪಟ್ಟಿಯಿಂದ ಹೊರಗಿರಬಾರದು. ಈ ದಿಸೆಯಲ್ಲಿ ಪರಿಣಾಮಕಾರಿ ಕೆಲಸವಾಗಬೇಕು. ಎಸ್‌ಐಆರ್ ಅಭಿಯಾನ ಯಶಸ್ವಿಯಾಗಿ ನಡೆಯಲು ಬೂತ್ ಮಟ್ಟದ ಕಾರ್ಯಕರ್ತರ ಮೇಲೆ ಹೆಚ್ಚಿನ ಹೊಣೆಗಾರಿಕೆಯಿದೆ. ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಸಮನ್ವಯತೆ ಸಾಧಿಸಿ ಈ ಅಭಿಯಾನ ಯಶಸ್ಸುಗೊಳಿಸಬೇಕೆಂದು ನಾಗಮಾರಪಳ್ಳಿ ಅವರು ಕೋರಿದರು.

ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಅವರು ಮಾತನಾಡಿ, ಪ್ರತಿಯೊಬ್ಬ ಅರ್ಹರು ಮತದಾರರ ವಿವರಗಳನ್ನು ಪರಿಶೀಲಿಸಿ, ಯಾವುದೇ ತಪ್ಪುಗಳಿದ್ದರೆ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಹೊಸ ಮತದಾರರು ನೋಂದಣಿ ಮಾಡಿಸಿಕೊಳ್ಳಬೇಕು. ಇದು ನಮ್ಮ ಹೊಣೆಯಾಗಿದೆ. ನಾವು ಪ್ರಜಾಪ್ರಭುತ್ವದ ಲಾಭ ಪಡೆಯುತ್ತಿದ್ದೇವೆ ಎಂದರೆ ಅದರ ಸಂರಕ್ಷಣೆಯಲ್ಲೂ ನಮ್ಮ ಪಾತ್ರ ಇರಬೇಕು. ಎಸ್ ಐಆರ್ ಪ್ರಕ್ರಿಯೆ ಯಶಸ್ಸಿನಲ್ಲಿ ಬೂತ್ ಕಾರ್ಯಕರ್ತರ ಮೇಲೆ ದೊಡ್ಡ ಜವಾಬ್ದಾರಿಯಿದೆ ಎಂದರು.

ಪಕ್ಷದ ಹಿರಿಯ ನಾಯಕರಾದ ಶಾಂತಲಿAಗ ಸಾವಳಗಿ, ಉಮಾಕಾಂತ್ ನಾಗಮಾರಪಳಿ, ಬಸವರಾಜ್ ಪಾಟೀಲ್ ಹಾರುರಗೇರಿ, ತರುಣ್ ಸೂರ್ಯಕಾಂತ ನಾಗಮಾರಪಳ್ಳಿ, ಬೆಂಗಳೂರಿನ ಅಶ್ವಿನಕುಮಾರ್, ದೇವೆಂದ್ರ ಸೋನಿ, ಶ್ರೀಮತಿ ಲಲಿತಾ ಕರಂಜೆ, ಬೊಮಗೊಂಡ ಚಿಟ್ಟಾ, ಐಲಿನ್ ಜಾನ್ ಮಠಪತಿ, ಸಜ್ಜಾದ್ ಸೈಯದ್, ಅಶೋಕ ಕೋಡಗೆ, ರಾಜು ಚಿಂತಾಮಣಿ, ಅಭಿ ಕಾಳೆ, ಅರುಣ ಹೊತಪೇಟ, ನವಾಜ್ ಖಾನ್, ಶಿವಕುಮಾರ್ ಭಾವಿಕಟ್ಟಿ, ಜಾಫಟ್ ಕಡ್ಯಾಳ್, ಮನೋಹರ ದಂಡೆ, ಪ್ರಸಾದ್ ಪಾಟೀಲ್, ವಿಜಯ್ ಮೇತ್ರೆ ಸಂಗಮ್ಮ ಮತ್ತಿತರ ಗಣ್ಯರು, ಹಿರಿಯರು ಉಪಸ್ಥಿತರಿದ್ದರು.

Share This Article
Leave a Comment