ಬೀದರ್, ಮೇ.೨೭- ರಸಗೊಬ್ಬರ, ಡೀಜಲ್ ಹಾಗೂ ಪೆಟ್ರೋಲ್ ದರಗಳ ನಿರಂತರ ಏರಿಕೆಯಿಂದ ರೈತರು ಮತ್ತು ಕಾರ್ಮಿಕ ವರ್ಗ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಗ್ರಾಮೀಣ ಆರ್ಥಿಕ ನೀತಿ ಘೋಷಣೆ, ರೈತರ ಸಾಲಮನ್ನಾ ಹಾಗೂ ೬೦ ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ ಗೌರವಧನ ನೀಡುವಂತೆ ಸಂಯುಕ್ತ ಕಿಸಾನ ಮೋರ್ಚಾ ಜಿಲ್ಲಾ ಘಟಕದ ಶಿವರಾಯ್ ಮುದಾಳೆ ಅವರು ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಕನಿಷ್ಠ ಬೆಂಬಲ ಬೆಲೆ ಕುರಿತು ಕಾನೂನು ಜಾರಿಗೆ ತರಬೇಕು. ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ರೈತರಿಗೆ ಪ್ರಯೋಜನಕಾರಿಯಾಗಿಲ್ಲ ಎಂದು ಆರೋಪಿಸಿದೆ. ಸಂಸತ್ತಿನಲ್ಲಿ ಕುರಿತು ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಸಂದರ್ಭದಲ್ಲಿ ರಸಗೊಬ್ಬರ, ಡೀಜಲ್ ಮತ್ತು ಪೆಟ್ರೋಲ್ ದರ ಏರಿಕೆಯಿಂದ ಕೃಷಿ ವೆಚ್ಚ ದುಪ್ಪಟ್ಟಾಗಿದ್ದು, ಟ್ರ‍್ಯಾಕ್ಟರ್ ಉಳುಮೆ, ನೀರಾವರಿ ಪಂಪ್‌ಸೆಟ್ ಬಳಕೆ ಹಾಗೂ ಬೆಳೆ ಸಾಗಾಣಿಕೆ ವೆಚ್ಚ ಹೆಚ್ಚಳದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ರೈತರ ಸಾಲಮನ್ನಾ ಮಾಡಬೇಕು ಹಾಗೂ ೬೦ ವರ್ಷ ಪೂರೈಸಿರುವ ರೈತರಿಗೆ ಪ್ರತಿ ತಿಂಗಳು ರೂ.೧೦ ಸಾವಿರ ಗೌರವಧನ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ ರಸಗೊಬ್ಬರ ದರ ಇಳಿಕೆ ಅಥವಾ ನೇರ ನಗದು ವರ್ಗಾವಣೆ ಮೂಲಕ ಸಹಾಯಧನ ನೀಡಬೇಕು, ರೈತರಿಗೆ ಡೀಜಲ್ ಮತ್ತು ಪೆಟ್ರೋಲ್ ರಿಯಾಯಿತಿ ದರದಲ್ಲಿ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ರೈತರಿಗೆ ಸೌಲಭ್ಯ ಪಡೆಯಲು ಜಾರಿಯಲ್ಲಿರುವ ಇ-ವ್ಯವಸ್ಥೆ ರದ್ದುಪಡಿಸಿ, ಪಹಣಿ ಪರಿಶೀಲನೆ ಆಧಾರದ ಮೇಲೆ ಸೌಲಭ್ಯ ವಿತರಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳಿಂದ ಪ್ರತಿ ಟನ್‌ಗೆ ೧ ಕೆ.ಜಿ. ಸಕ್ಕರೆ ನೀಡಬೇಕು, ಹೈನುಗಾರಿಕೆ ರೈತರಿಗೆ ಎಮ್ಮೆ-ಹಸು ಸಾಲ ಮಂಜೂರು ಮಾಡಬೇಕು ಹಾಗೂ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಬಗರ್‌ಹುಕುಂ ಸಾಗುವಳಿದಾರರನ್ನು ಕ್ರಮಬದ್ಧಗೊಳಿಸುವುದು, ಇನಾಂ ಭೂಮಿ ನ್ಯಾಯಮಂಡಳಿ ರಚನೆ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಲೇಬರ್ ಕೋಡ್‌ಗಳನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸ್ವಾಮಿ, ನಜೀರ ಅಹ್ಮದ್, ಮಾರುತಿ ಬೌದ್ಧೆ, ಬಾಬುರಾವ್ ಹೊನ್ನಾ, ಕೊಂಡಿಬಾರಾವ್ ಪಾಂಡ್ರೆ, ವಿಠಲ್ ರಾವ ಮೇತ್ರೆ, ಕಾಶಿನಾಥ ಭೂರೆ, ಷಣ್ಮೂಕಪ್ಪಾ, ಧೂಲಪ್ಪಾ, ವಿಶ್ವನಾಥ ಧರಣಿ, ಖಾಸಿಮ್ ಅಲಿ, ಶಿವರಾಜ್ ಪಾಟೀಲ್ ಅತಿವಾಳ್, ಖಮರ್ ಪಟೇಲ್, ಬಸವರಾಜ ಅಷ್ಟೂರ, ಶಫಾಯತ್ ಅಲಿ, ನಾಗೇಂದ್ರಪ್ಪ ನಂಜವಾಡೆ, ಜೈಶೀಲಕುಮಾರ, ಅರುಣ ಪಟೇಲ್, ನನ್ನೇಸಾಬ್ ಟಿ. ಮಿರ್ಜಾಪೂರ್, ಭಾವುರಾವ ನೆಳವಾಡೆ, ಶಾಂತಮ್ಮಾ ಮೂಲಗೆ, ಮುಖಿಯೋದ್ದೀನ್, ಪಾಂಡುರAಗ್ ಪ್ಯಾಗೆ ಹಾಗೂ ವೀರಶೆಟ್ಟಿ ವಟ್ಟಂಬೆ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.