ಚೆನ್ನೈ, ಜೂನ್ 16:
ತಮಿಳುನಾಡು ಸರ್ಕಾರವು ರಾಜ್ಯದ ಹಣಕಾಸು ನಿರ್ವಹಣೆಯ ಕುರಿತು ಶ್ವೇತಪತ್ರವನ್ನು ಬಿಡುಗಡೆ ಮಾಡಿದ್ದು, ಹಿಂದಿನ ಡಿಎಂಕೆ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದೆ. ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಅವರು ಮಂಗಳವಾರ ಚೆನ್ನೈನ ಕಾರ್ಯಾಲಯದಲ್ಲಿ ಶ್ವೇತಪತ್ರವನ್ನು ಬಿಡುಗಡೆ ಮಾಡಿ ರಾಜ್ಯದ ಪ್ರಸ್ತುತ ಆರ್ಥಿಕ ಸ್ಥಿತಿಗತಿಗಳ ಕುರಿತು ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ತಮಿಳುನಾಡಿನ ನೇರ ಸಾಲದ ಹೊರೆ ಈಗ ₹10 ಲಕ್ಷ ಕೋಟಿಗೆ ತಲುಪಿದೆ ಎಂದು ತಿಳಿಸಿದರು. ಅಲ್ಲದೆ, ರಾಜ್ಯದ ಆದಾಯ ಕೊರತೆ ₹78,324 ಕೋಟಿಗೆ ಏರಿಕೆಯಾಗಿದ್ದು, ಇದು ರಾಜ್ಯದ ಇತಿಹಾಸದಲ್ಲೇ ಕಾಣದ ಮಟ್ಟದ ದಾಖಲೆ ಎಂದು ಹೇಳಿದರು.
ಶ್ವೇತಪತ್ರದಲ್ಲಿ ಹಿಂದಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ಹಣಕಾಸು ನಿರ್ವಹಣೆಯ ಕುರಿತು ಪ್ರಶ್ನೆ ಎತ್ತಲಾಗಿದೆ. ರಾಜ್ಯದ ಸ್ವಂತ ತೆರಿಗೆ ಆದಾಯ (State’s Own Tax Revenue) ಮತ್ತು ಒಟ್ಟು ರಾಜ್ಯ ಆಂತರಿಕ ಉತ್ಪನ್ನ (GSDP) ನಡುವಿನ ಅನುಪಾತ ಕೇವಲ 5.45 ಶೇಕಡಾ ಇದ್ದು, ಇದು ತೀರಾ ಕಡಿಮೆ ಮಟ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಎ. ಸಿದ್ದೀಕ್, ವೆಚ್ಚ ವಿಭಾಗದ ಕಾರ್ಯದರ್ಶಿ ಎನ್. ವೆಂಕಟೇಶ್ ಹಾಗೂ ಉಪ ಕಾರ್ಯದರ್ಶಿ ಸಿ.ಎ. ರಿಷಭ್ ಅವರು ಶ್ವೇತಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದ್ದು, ಹಣಕಾಸು ಶಿಸ್ತು ಹಾಗೂ ಆದಾಯ ವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಮೇರಿ ವಿಲ್ಸನ್ ತಿಳಿಸಿದರು. ಶ್ವೇತಪತ್ರದ ಬಿಡುಗಡೆ ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಡಿಎಂಕೆ ಹಾಗೂ ಆಡಳಿತ ಪಕ್ಷದ ನಡುವೆ ಹಣಕಾಸು ನಿರ್ವಹಣೆ ಕುರಿತ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.