ಕಲಬುರ್ಗಿ, ಮೇ.೨೧- ನಗರದ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳು ಮತ್ತೆ ಪತ್ತೆಯಾಗಿವೆ. ಕಾರಾಗೃಹದ ಒಳಭಾಗದಲ್ಲಿನ ಸಂದರ್ಶನ ಕೊಠಡಿಯ ಮೆಟ್ಟಿಲಿನ ಪಕ್ಕದಲ್ಲಿ ಬಿದ್ದಿದ್ದು, ಅದನ್ನು ಗಮನಿಸಿದ ಸಿಸಿಟಿವಿ ಪಹರೆ ಸಿಬ್ಬಂದಿ ಶ್ರೀಮತಿ ಸವಿತಾ ಬಿರಾದಾರ್ ಅವರು ಜೈಲರ್ ಮೋಹನ್ ಮಾರನೂರ್ ಅವರಿಗೆ ಮಾಹಿತಿ ನೀಡಿದರು.
ಸಹಾಯಕ ಅಧೀಕ್ಷಕ ಬಿ. ಸುರೇಶ್ ಮತ್ತು ಇತರೆ ಸಿಬ್ಬಂದಿಗಳು ಸೇರಿ ಸಂದರ್ಶನ ಕೊಠಡಿಯ ಮೆಟ್ಟಿಲಿನ ಪಕ್ಕದಲ್ಲಿ ಬಿದ್ದಿದ್ದ ವಸ್ತುವನ್ನು ಕಾರಾಗೃಹದ ಬ್ಯಾರಕ್ ಸಂಖ್ಯೆ ೧೭ರಲ್ಲಿ ದಾಖಲಾಗಿರುವ ವಿಚಾರಣೆ ಬಂದಿ ಎಂ.ಡಿ. ಸಮೀರ್ ಅಲಿಯಾಸ್ ಟಮಟಾ ಸಮೀರ್ ತಂದೆ ಅಬ್ದುಲ್ ನಬಿಸಾಬ್ ಎಂಬುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿತು.
ತಕ್ಷಣ ವಿಚಾರಣಾ ಬಂಧಿ ಎಂ.ಡಿ. ಸಮೀರನಿಗೆ ತಪಾಸಣೆಗೆ ಒಳಪಡಿಸಿದಾಗ ಆತನ ಬಳಿ ಐದು ಪ್ಯಾಕೆಟ್ ತಂಬಾಕು, ಎರಡು ಪ್ಯಾಕೆಟ್ ಗ್ಲೋಡ್ ಪ್ಯಾಕ್ ಸಿಗರೇಟ್, ಮೂರು ಗಣೇಶ್ ಬೀಡಿಗಳ ಕಟ್‌ಗಳು, ಏಳು ಸುಣ್ಣದ ಪ್ಯಾಕೆಟ್‌ಗಳು ಪತ್ತೆಯಾದವು. ಈ ಕುರಿತು ವಾರ್ಡರ್ ಬಸಯ್ಯ ಹಿರೇಮಠ್ ಅವರು ದೂರು ಸಲ್ಲಿಸಿದ್ದು, ಫರತಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.