ಬೀದರ್, ಜೂ.೭- ಅಧಿಕಮಾಸದ ಪುಣ್ಯಕಾಲದ ಅಂಗವಾಗಿ ಒಡವಾಡಾ(ಆಗ್ರಹಾರ)ದಲ್ಲಿ ಸುಪ್ರಸಿದ್ಧ ಶ್ರೀ ಅನಂತಶಯನ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾನುವಾರ ಲೋಕಕಲ್ಯಾಣಾರ್ಥವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆ-ಹವನಗಳನ್ನು ಭಕ್ತಿಭಾವದಿಂದ ಜರುಗಿತು. ಶ್ರೀನಾಥ್ ದೀಕ್ಷಿತ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಬೆಳಿಗ್ಗೆ ೭ ಗಂಟೆಯಿAದ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ಸೇವೆಗಳನ್ನು ನೆರವೇರಿಸಲಾಯಿತು. ನಂತರ ಶ್ರೀ ನಾರಾಯಣ ದೇವರ ಸಂಕಲ್ಪ ಪೂಜೆ ನಡೆಸಿ ರಾಜ್ಯ, ದೇಶ ಹಾಗೂ ವಿಶ್ವದ ಜನರ ಸುಖ, ಶಾಂತಿ, ಸಮೃದ್ಧಿ ಮತ್ತು ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ನವಗ್ರಹ ಹವನ, ಶ್ರೀ ಸೂಕ್ತ ಹವನ ಹಾಗೂ ಶ್ರೀ ನಾರಾಯಣ ಹವನಗಳನ್ನು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ಹವನದಲ್ಲಿ ಭಕ್ತರು ಭಾಗವಹಿಸಿ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ದಂಪತಿಗಳ ಪಾದಪೂಜೆ ಕಾರ್ಯಕ್ರಮವು ಸಹ ವಿಶೇಷ ಆಕರ್ಷಣೆಯಾಗಿದ್ದು, ದಂಪತಿಗಳಿಗೆ ಆಶೀರ್ವಾದ ನೀಡಲಾಯಿತು.
ಮುಖ್ಯ ಅತಿಥಿಗಳಾದ ಬಿಜೆಪಿ ಮುಖಂಡ ಈಶ್ವರ್ ಸಿಂಗ್ ಠಾಕೂರ್ ಅವರು ಮಾತನಾಡಿ, ಸನಾತನ ಧರ್ಮದಲ್ಲಿ ಅಧಿಕಮಾಸಕ್ಕೆ ವಿಶೇಷ ಮಹತ್ವವಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ಈ ಪವಿತ್ರ ಮಾಸದಲ್ಲಿ ದೇವರ ಆರಾಧನೆ, ಜಪ, ತಪ, ದಾನ-ಧರ್ಮ ಹಾಗೂ ಧಾರ್ಮಿಕ ಆಚರಣೆಗಳನ್ನು ನಡೆಸುವುದರಿಂದ ವಿಶೇಷ ಪುಣ್ಯ ಲಭಿಸುತ್ತದೆ ಎಂದು ಹೇಳಿದರು.
ಶ್ರೀನಾರಾಯಣ ಪೂಜೆಯನ್ನು ಅಧಿಕಮಾಸದಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದ್ದು, ಲೋಕ ಕಲ್ಯಾಣ ಹಾಗೂ ಸಮಾಜದ ಶಾಂತಿ-ಸಮೃದ್ಧಿಗಾಗಿ ಶ್ರೀನಾಥ್ ಮಹಾರಾಜರು ಹಮ್ಮಿಕೊಂಡಿರುವ ಈ ಧಾರ್ಮಿಕ ಕಾರ್ಯಕ್ರಮ ಅತ್ಯಂತ ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧಾರ್ಮಿಕ ಚಿಂತನೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬೀದರ್‌ನ ಖ್ಯಾತ ಪುರೋಹಿತರಾದ ಗೋವಿಂದ ಮಹಾರಾಜ್, ಶ್ರೀಕಾಂತ್ ದೀಕ್ಷಿತ್ ಮಹಾರಾಜ್ ಸೇರಿದಂತೆ ಹಲವಾರು ವೇದಪಂಡಿತರು, ಪುರೋಹಿತರು ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ದೇವಸ್ಥಾನದಲ್ಲಿ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪೂಜೆ, ಹವನ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿ ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆದರು.