ಯಡ್ರಾಮಿ, ಮೇ 16: ಯಡ್ರಾಮಿ ಪಟ್ಟಣ ಸೇರಿದಂತೆ ತಾಲೂಕಿನ 62 ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣ ನಿಲ್ಲಿಸಬೇಕೆಂದು ಆಗ್ರಹಿಸಿ ಜನರು ಬೃಹತ್ ಪ್ರತಿಭಟನೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. “ಒಳ್ಳೆಯ ಬೆಳವಣಿಗೆ, ಇದಕ್ಕೆ ಸಂಪೂರ್ಣ ಬೆಂಬಲ” ಎಂಬ ಅಭಿಪ್ರಾಯಗಳು ಸಾಮಾಜಿಕ ವಲಯದಲ್ಲೂ ಕೇಳಿಬರುತ್ತಿವೆ.
ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು, ಯುವಕರು, ಪ್ರಗತಿಪರ ಸಂಘಟನೆಗಳು ಹಾಗೂ ವಿವಿಧ ಗ್ರಾಮಗಳ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ತಾಂಡ, ಹಟ್ಟಿ, ಓಣಿ, ಕಿರಾಣಿ ಅಂಗಡಿ, ಪಾನ್ ಶಾಪ್, ಸಣ್ಣ ಹೋಟೆಲ್ ಹಾಗೂ ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಕುಟುಂಬ ವ್ಯವಸ್ಥೆ ಹದಗೆಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮದ್ಯದ ಚಟದಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಕೆಲ ಯುವಕರು ಮನೆಯ ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳು ಹಾಗೂ ಮಗಳ ಮದುವೆಗಾಗಿ ಉಳಿಸಿದ್ದ ಹಣವನ್ನೂ ಕಳವು ಮಾಡಿ ಮದ್ಯಪಾನಕ್ಕೆ ಬಳಸುತ್ತಿರುವ ಬಗ್ಗೆ ಮಹಿಳೆಯರು ಕಳವಳ ವ್ಯಕ್ತಪಡಿಸಿದರು. ಕುಡಿತದ ಅಮಲಿನಲ್ಲಿ ಮನೆಗೆ ಬರುವ ಕೆಲವರು ಹೆಂಡತಿ, ಮಕ್ಕಳು ಮತ್ತು ವೃದ್ಧ ತಂದೆ-ತಾಯಿಯರ ಮೇಲೆ ಹಲ್ಲೆ ನಡೆಸುತ್ತಿರುವುದು ಗ್ರಾಮೀಣ ಭಾಗದಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ತಿಳಿಸಿದರು.
ಅಪ್ರಾಪ್ತ ವಯಸ್ಸಿನ ಬಾಲಕರಿಗೂ ಸುಲಭವಾಗಿ ಮದ್ಯ ಲಭ್ಯವಾಗುತ್ತಿರುವುದು ಸಮಾಜದ ಭವಿಷ್ಯದ ಮೇಲೆಯೇ ದುಷ್ಪರಿಣಾಮ ಬೀರುತ್ತಿದೆ ಎಂಬ ಆತಂಕ ವ್ಯಕ್ತವಾಯಿತು. ಇತ್ತೀಚೆಗೆ ಅಫಜಲ್ಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಮದ್ಯದ ನಶೆಯಲ್ಲಿ ನಡೆದ ಕೊಲೆ ಪ್ರಕರಣವನ್ನು ಉಲ್ಲೇಖಿಸಿದ ಪ್ರತಿಭಟನಾಕಾರರು, ಅಕ್ರಮ ಮದ್ಯವೇ ಅನೇಕ ಅಪರಾಧಗಳಿಗೆ ಮೂಲ ಕಾರಣವಾಗುತ್ತಿದೆ ಎಂದು ಆರೋಪಿಸಿದರು.
ಧಾರ್ಮಿಕ ಸ್ಥಳಗಳು, ಶಾಲೆಗಳು, ಸರ್ಕಾರಿ ಕಚೇರಿಗಳು, ತಾಂಡ-ಹಟ್ಟಿಗಳು ಹಾಗೂ ಬಸ್ ನಿಲ್ದಾಣಗಳ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಅಕ್ರಮ ಮದ್ಯ ಮಾರಾಟ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದಲ್ಲಿ ಸಮಗ್ರ ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮೇ 15ರಂದು ನಡೆದ ಈ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿ “ಅಕ್ರಮ ಮದ್ಯ ಮುಕ್ತ ತಾಲೂಕು” ಘೋಷಣೆಗಳನ್ನು ಕೂಗಿದರು. ಏಳು ದಿನಗಳೊಳಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಚಿಗರಳ್ಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಕ್ರಮ ಮದ್ಯ ಮಾರಾಟದ ವಿರುದ್ಧ ಜನರು ಸಂಘಟಿತವಾಗಿ ಹೋರಾಟಕ್ಕೆ ಇಳಿದಿರುವುದು ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿರುವ ಮಹತ್ವದ ಬೆಳವಣಿಗೆಯಾಗಿದೆ.