ಕಲಬುರ್ಗಿ ಬಿಸಿಎಂ ಅಧಿಕಾರಿ ನಡೆ ಖಂಡಿಸಿ ಎಬಿವಿಪಿ ಪ್ರತಿಭಟನೆ

 

ಕಲಬುರ್ಗಿ, ಜೂ.೧೯- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯನ್ನು ನಿವಾರಿಸುವಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಗರ ವ್ಯಾಪ್ತಿಯ ಅಧಿಕಾರಿ ವಿಫಲವಾಗಿದ್ದಾರೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.

ವಸತಿ ನಿಲಯಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಇದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಬಿಸಿಎಂ ಅಧಿಕಾರಿಗೆ ದೂರು ಸಲ್ಲಿಸಿದರೂ ಸಹ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನೆಕಾರರು, ಸ್ಥಳಕ್ಕೆ ಬಿಸಿಎಂ ಅಧಿಕಾರಿ ಬರಬೇಕು ಎಂದು ಪಟ್ಟು ಹಿಡಿದರು. ಅಲ್ಲದೇ ಆ ಸಮಯದಲ್ಲಿ ಕೆಲ ಉದ್ರಿಕ್ತರು ಕಚೇರಿ ಆವರಣದಲ್ಲಿನ ಸಸಿಗಳ ಕುಂಡಲಗಳನ್ನು ಕಿತ್ತುಹಾಕಿ ನೆಲಕ್ಕೆ ಎಸೆದು ಒಡೆದುಹಾಕಿ ಆಕ್ರೋಶ ಹೊರಹಾಕಿದರು.

ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುವುದನ್ನು ಪೋಲಿಸರು ದೌಡಾಯಿಸಿ ತಡೆದರು. ನಂತರ ಪ್ರತಿಭಟನೆಕಾರರು ಮನವಿ ಪತ್ರವನ್ನು ಅಧಿಕಾರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ಶರಣು ಪೂಜಾರಿ, ರಾಜ್ಯ ಸಹ ಕಾರ್ಯದರ್ಶಿ ಹಣಮಂತ್ ಬಗಲಿ, ಶ್ರವಣ್, ಅವಿನಾಶ್ ಗುತ್ತೇದಾರ್, ಸಂದೇಶ್, ಮನೋಜ್ ಪಾಟೀಲ್, ಮನೋಜ್ ಶೆಟ್ಟಿ, ಶಿವು ಸಜ್ಜನ್ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Share This Article
Leave a Comment