ಪಾಂಡವಪುರ (ಮಂಡ್ಯ ಜಿಲ್ಲೆ): ಕೆ.ಆರ್.ಎಸ್. ಅಣೆಕಟ್ಟೆಯ ನೀರಿನ ಮಟ್ಟ 88 ಅಡಿಗೆ ಇಳಿಕೆಯಾಗಿದ್ದು, ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ನಾರಾಯಣಸ್ವಾಮಿ ದೇಗುಲ 3 ವರ್ಷಗಳ ನಂತರ ಸಂಪೂರ್ಣ ಗೋಚರವಾಗಿದೆ.
ಕೃಷ್ಣರಾಜ ಸಾಗರ ಜಲಾಶಯದ ಬೋರೆ ಆನಂದೂರು ಸಮೀಪದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ನಾರಾಯಣಸ್ವಾಮಿ ದೇವಾಲಯ ಮೂರು ವರ್ಷಗಳ ಹಿಂದೆ 2023ರಲ್ಲಿ ಗೋಚರವಾಗಿತ್ತು.
ಕೆ.ಆರ್. ಸಾಗರ ಅಣೆಕಟ್ಟೆಯ ನಿರ್ಮಾಣ ಸಂದರ್ಭದಲ್ಲಿ ನೂರು ವರ್ಷಗಳ ಹಿಂದೆಯೇ ದೇವರ ಮೂರ್ತಿಯನ್ನು ಸ್ಥಳಾಂತರ ಮಾಡಲಾಗಿತ್ತು. ಉಳಿದಿದ್ದ ಗೋಪುರ ಮತ್ತು ದೇವಸ್ಥಾನ ಕಂಬಗಳು ಈಗ ಕಾಣಿಸಿಕೊಂಡಿವೆ.
ನಾರಾಯಣಸ್ವಾಮಿ ದೇಗುಲವು ಸುತ್ತಮುತ್ತಲಿನ ಹತ್ತು ಗ್ರಾಮಗಳ ಮನೆ ದೇವರಾಗಿದೆ. ಮಜ್ಜಿಗೆರ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದು, ಮೂಲ ದೇವರಾದ ನಾರಾಯಣಸ್ವಾಮಿ ದೇವರಿಗೆ ನಿತ್ಯ ಪೂಜೆಗಳು ನಡೆಯುತ್ತಿವೆ.